ಲಾತೂರ್: ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ರಸ್ತೆ ಅಪಘಾತ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ, “ನೀನು ಪಾಕಿಸ್ತಾನಿಯೊ ಅಥವಾ ಕಾಶ್ಮೀರಿಯೊ” ಎಂದು ನಿಂದಿಸಿದ್ದ ವ್ಯಕ್ತಿಯ ಪತ್ತೆಗೆ ಲಾತೂರ್ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಯ ಬೆನ್ನಿಗೇ, ಸಾರ್ವಜನಿಕವಾಗಿ ತಮಗಾದ ಅವಮಾನದಿಂದ ಮನನೊಂದು ಅಮೀರ್ ಪಠಾಣ್ (೩೦) ಎಂಬ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಮೃತ ಅಮೀರ್ ಪಠಾಣ್‌ರ ಮೇಲೆ ತಾನು ನಡೆಸಿದ ಹಲ್ಲೆಯ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ ಆರೋಪಿ ಪತ್ರಕರ್ತನೋರ್ವ, ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಾಗಿ ಅವರಿಗೆ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ. ಇದರ ಬೆನ್ನಲ್ಲೇ, ಮೊಬೈಲ್ ಸೇವಾ ಸಂಸ್ಥೆಯೊಂದರಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಮೀರ್ ಪಠಾಣ್, ಮೇ ೪ರಂದು ಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಮೃತ ಅಮೀರ್ ಪಠಾಣ್‌ರ ಪತ್ನಿ ನೀಡಿದ ದೂರನ್ನು ಆಧರಿಸಿ, ಮೇ ೫ರಂದು ಆರೋಪಿ ಪತ್ರಕರ್ತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಸುದ್ದಿ ಪೋರ್ಟಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ಪತ್ರಕರ್ತ ಸದ್ಯ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಎಂಐಡಿಸಿ ಲಾತೂರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ನೆರೆಯ ಧರಾಶಿವ್ ಜಿಲ್ಲೆಯಲ್ಲಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಉಪ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೃತ ಅಮೀರ್ ಪಠಾಣ್‌ರ ಪತ್ನಿ ಸಮ್ರೀನ್ (೨೯) ಎಂಬವರು ಮೇ ೩ರ ರಾತ್ರಿ ಎಂದಿನಿಂತೆ ತನ್ನನ್ನು ಕರೆದೊಯ್ಯುವಂತೆ ತಮ್ಮ ಪತಿಗೆ ಫೋನ್ ಕರೆ ಮಾಡಿದಾಗ, ಅವರು ನನ್ನನ್ನು ಹೊಡೆಯಬೇಡಿ ಎಂದು ಯಾರನ್ನೋ ಗೋಗರೆಯುತ್ತಿರುವುದು ಹಾಗೂ ಆ ಘಟನೆಯಲ್ಲಿ ಅವರದ್ದೇನೂ ತಪ್ಪಿಲ್ಲದಿರುವುದು ಅವರಿಗೆ ಕೇಳಿದೆ ಎಂದು ಹೇಳಲಾಗಿದೆ.
“ಫೋನ್ ಕರೆಯ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ನನ್ನ ಪತಿಗೆ ತಾನು ಪತ್ರಕರ್ತ ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡೆ. ಈ ವೇಳೆ, ಆತ ನನ್ನ ಪತಿಯನ್ನು ನೀನೇನಾದರೂ ಪಾಕಿಸ್ತಾನದವನೆ ಅಥವಾ ಕಾಶ್ಮೀರದವನೊ ಎಂದು ಪ್ರಶ್ನಿಸಿ, ನಂತರ ಅವರನ್ನು ಥಳಿಸುತ್ತಿರುವುದನ್ನು ಕೇಳಿಸಿಕೊಂಡೆ. ನನ್ನ ಪತಿ ನೋವಿನಿಂದ ಚೀರಿಕೊಳ್ಳುತ್ತಿರುವುದೂ ನನಗೆ ಕೇಳಿಸಿತು” ಎಂದು ಸಮ್ರೀನ್ ಆರೋಪಿಸಿದ್ದಾರೆ.
ಇದರ ಬೆನ್ನಿಗೇ, ಮೇ ೪ರ ಸಂಜೆ ಕುಟುಂಬದ ಸದಸ್ಯರೆಲ್ಲರೂ ವಿವಾಹ ಆರತಕ್ಷತೆಯೊಂದಕ್ಕೆ ತೆರಳಲು ಸಿದ್ದವಾದಾಗ, ನೀವು ಮುಂದೆ ಹೋಗಿ. ನಂತರ ನಾನು ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದು ಅಮೀರ್ ಪಠಾಣ್ ತನ್ನ ಕುಟುಂಬದ ಸದಸ್ಯರಿಗೆ ಹೇಳಿದ್ದಾರೆ. ಒಂದು ಗಂಟೆಯ ನಂತರ, ಕುಟುಂಬದ ಸದಸ್ಯರು ಮನೆಗೆ ಮರಳಿದಾಗ, ಅಮೀರ್ ಪಠಾಣ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತಾದರೂ, ಲಾತೂರ್ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಲಾತೂರ್ ಸರಕಾರಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
ಈ ಸಂಬಂಧ ಸಮ್ರೀನ್ ನೀಡಿದ ದೂರನ್ನು ಆಧರಿಸಿ, ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.