ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಾಡೆಮ್ಮೆ ಮೇಲೆ ಹುಲಿಯೊಂದು ದಾಳಿಗೆ ಮುಂದಾದಾಗ ಕೂದಲೆಳೆಯ ಅಂತರದಲ್ಲಿ ಕಾಡೆಮ್ಮೆ ಪಾರಾಗಿರುವ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಅಭಯಾರಣ್ಯದಲ್ಲಿ ಹುಲಿ ದಾಳಿ ಮಾಡಲು ಮುಂದಾಗುವುದನ್ನು ಗಮನಿಸಿ ಕಾಡೆಮ್ಮೆ ಮಿಂಚಿನಂತೆ ಓಡಿ ಹುಲಿ ಬಾಯಿಂದ ಪಾರಾಗಿದೆ. ಕೆಲ ಮೀಟರ್ ಅಟ್ಟಾಡಿಸಿದ ಹುಲಿಯು ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸಾಗಿದ್ದು, ಹುಲಿಯ ಚೇಸಿಂಗ್ ದೃಶ್ಯವನ್ನು ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿರೊಬ್ಬರು ಸೆರೆ ಹಿಡಿದು ಪುಳಕಿತರಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿಯೊಂದು ಕಾಡೆಮ್ಮೆ ಬೇಟೆಯಾಡಿ ಮಾಂಸವನ್ನು ಕಿತ್ತು ತಿನ್ನುತ್ತಿರುವ ದೃಶ್ಯ ಸೆರೆಯಾಗಿತ್ತು. ಜನರು ಗೋಪಾಲಸ್ವಾಮಿ ಬೆಟ್ಟದಿಂದ ಹಿಂದಿರುಗುವಾಗ ಗುಡ್ಡದಲ್ಲಿ, ಕಾಡೆಮ್ಮೆಯ ತಲೆಭಾಗವನ್ನು ಹುಲಿರಾಯ ಕಿತ್ತು ಎಳೆದೊಯ್ಯುತ್ತಿರುವ ದೃಶ್ಯ ಕಂಡು ಬಂದಿತ್ತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಬಂಡೀಪುರ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಸಫಾರಿಗೆ ತೆರಳಿದ ಹಲವು ಮಂದಿಗೆ ಹುಲಿ ಗೋಚರಿಸುತ್ತಲೇ ಇದೆ. ಅಷ್ಟೇ ಅಲ್ಲದೆ ನವಿಲು, ಜಿಂಕೆ, ಕಾಡಾನೆಗಳ ಕಾಣಿಸಿಕೊಳ್ಳುತ್ತಿದೆ. ಇದರಿಂದ ಪ್ರತಿನಿತ್ಯ ಬಂಡೀಪುರ ಸಫಾರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಕೂಡ ಅಧಿಕವಾಗಿದೆ.