ಬೆಂಗಳೂರು: ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-೩ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ದಿನವಾದ ಆ.೨೩ ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.
ಚಂದ್ರಯಾನ-೩ ಯಶಸ್ಸಿನ ಕುರಿತು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿನ ಇಸ್ರೋ ಕಚೇರಿಗೆ ಇಂದು ಭೇಟಿ ನೀಡಿ ಅಭಿನಂದಿಸಿದ ಬಳಿಕ ಮಾತನಾಡಿದ ಅವರು, ಚಂದ್ರಯಾನ-೩ ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್ ಇನ್ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ ಎಂದು ಖುಷಿಯಿಂದ ಇಸ್ರೊ ವಿಜ್ಞಾನಿಗಳನ್ನು ಶ್ಲಾಘಿಸಿದರು.
ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಟ್ಟ ಮೋದಿ, ಚಂದ್ರನ ಮೇಲೆ ಪ್ರಗ್ಯಾನ್ ಪರಾಕ್ರಮ ಕಂಡು ಖುಷಿಯಾಗಿದೆ.ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ. ಆ. ೨೩ರ ಆ ದಿನ ನನ್ನ ಕಣ್ಣ ಮುಂದೆ ಪ್ರತಿ ಸೆಕೆಂಡ್ ಮತ್ತೆ ಮತ್ತೆ ತಿರುಗುತ್ತಿದೆ, ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಗ್ಯಾನ್ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.
ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಮೋದಿ ಹೇಳಿದರು.