ಮೈಸೂರು : ಆಟೋ ಸೀಟ್ ಬಾಡಿಗೆ ಹೊಡೆಯುವ ವಿಚಾರದಲ್ಲಿ ಇಬ್ಬರು ಯುವಕರು ಕ್ಯಾತೆ ತೆಗೆದು ಆಟೋ ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾತಗಳ್ಳಿ ನಿವಾಸಿ ನವೀದ್ ಪಾಷಾ (೨೫) ಗಾಯಗೊಂಡವರು. ಓಂಕಾರ್ ಹಾಗೂ ಶೇಖರ ಎಂಬುವರ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ. ನವೀದ್ ಪಾಷಾ ಅವರು ಗ್ರಾಮಾಂತರ ಬಸ್ ನಿಲ್ದಾಣದಿಂದ ಶಾಂತಿನಗರ, ಕೆಸರೆ ಬಡಾವಣೆಗೆ ಸೀಟ್ ಬಾಡಿಗೆ ಹೊಡೆಯುತ್ತಾರೆ. ಈ ವಿಚಾರದಲ್ಲಿ ಓಂಕಾರ್ ವಿರೋಧಿಸಿ ಈ ಜಾಗದಲ್ಲಿ ಸೀಟ್ ಬಾಡಿಗೆ ಹೊಡೆಯಬಾರದೆಂದು ಧಮಕಿ ಹಾಕಿದ್ದಾನೆ. ಓಂಕಾರ್ ಮಾತಿಗೆ ಕ್ಯಾರೆ ಎನ್ನದ ನವೀದ್ ಪಾಷ ಬಾಡಿಗೆ ಹೊಡೆಯಲು ಬಂದಾಗ ಎಷ್ಟು ಸಾರಿ ಹೇಳುವುದೋ ಎಂದು ಕಿರಿಕ್ ತೆಗೆದಿದ್ದಾನೆ.
ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ವೇಳೆ ಜೊತೆಗೆ ಬಂದಿದ್ದ ಶೇಖರ ಚಾಕುವಿನಿಂದ ಮುಖ, ಬೆನ್ನು, ತಲೆಗೆ ಇರಿದಿದ್ದಾನೆ. ಶೇಖರ್ ಜೊತೆಗೆ ಓಂಕಾರ್ ಸಹ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ನವೀದ್ ಪಾಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.