ಮೈಸೂರು: ಆತ್ಮಕಥೆಗಳು ಸಮಾಜದ ದರ್ಶನ ಮತ್ತು ಗತಿಬಿಂಬವಿದ್ದಂತೆ ಎಂದು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧಯನ ವಿಭಾಗದ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅಭಿಪ್ರಾಯಪಟ್ಟರು.
ನಗರದ ಇಂಜಿನಿಯರ್‍ಸ್ ಸಭಾಂಗಣದಲ್ಲಿ ಅಸ್ತಿತ್ವ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಡಿ.ಕೆ.ರಾಜೇಂದ್ರ ಅವರ ನನ್ನ ಜೀವ ನನ್ನ ಭಾವ ಆತ್ಮಕಥೆ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕವಿ ಅರವಿಂದ ಮಾಲಗತ್ತಿ ಹೇಳಿರುವಂತೆ ರಾಜೇಂದ್ರ ಅವರ ಗುಣ ಬೆಣ್ಣದ ಗುಡ್ಡದಂತೆ. ಅದು ಅವರ ಆತ್ಮಕಥೆಯಲ್ಲಿ ಕರಗಿ ಘನವಾದ ತುಪ್ಪದಂತೆ ಕಾಣುತ್ತದೆ. ಕುವೆಂಪು ಅವರು ತಮ್ಮ ನೆನಪಿನ ದೋಣಿ ಆತ್ಮಕಥೆಯಲ್ಲಿ ಅವಿಭಜಿತ ಕುಟುಂಬದ ಬಗ್ಗೆ ಸೊಗಸಾಗಿ ಬರೆದರೆ, ದೇಜಗೌ ಅವರ ಹೋರಾಟದ ಹಾದಿಯಲ್ಲಿ ಕನ್ನಡ ಭಾಷೆಗಾಗಿ ಅವರು ಶ್ರಮಿಸಿದ ಬಗ್ಗೆ ಹೇಳುತ್ತಾರೆ. ಮಾಲಗತ್ತಿ ಅವರ ಗೌರ್‍ನಮೆಂಟ್ ಬ್ರಾಹ್ಮಣ ಆತ್ಮಕಥೆಯಲ್ಲಿ ಮಲ ತಿನ್ನಿಸುವಂತಹ ಹೇಯ ಕೃತ್ಯಗಳು ಸಮಾಜದಲ್ಲಿವೆ ಎಂಬುದರ ಬಗ್ಗೆ ತಿಳಿಸಲಾಗಿದೆ. ಹೀಗೆ ಆತ್ಮಕಥೆಗಳು ನಮ್ಮ ಸಮಾಜದಲ್ಲಿರುವ ಹಸಿ ವಾಸ್ತವಗಳನ್ನು ಬಿತ್ತರಿಸುವ ಕೊಂಡಿಗಳಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಲೇಖಕಿ ಧರಣಿದೇವಿ ಮಾಲಗತ್ತಿ ಮಾತನಾಡಿ, ಡಾ.ಡಿ.ಕೆ.ರಾಜೇಂದ್ರ ಅವರ ಆತ್ಮಕಥೆ ವ್ಯಕ್ತಿತ್ವಗಳ ದರ್ಪಣ. ಇಲ್ಲಿ ಯಾರಿಗೂ ನೋವಾಗದ ರೀತಿಯಲ್ಲಿ ಆತ್ಮಕಥೆಯನ್ನು ವರ್ಣಿಸಿzರೆ. ಕೃತಿಯಲ್ಲಿ ಕೆಲವು ಜೀವನ ಸೂತ್ರಗಳನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ನಾಲಿಗೆ ಚೆನ್ನಾಗಿದ್ದರೆ ಸಮಾಜವೂ ಚೆನ್ನಾಗಿರುತ್ತದೆ ಎಂಬಂತೆ ನಾವು ಆಡುವ ಮಾತುಗಳು ಬೇರೆಯವರಿಗೆ ನೋವಾಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬದನ್ನೂ ದಾಖಲಿಸಿದ್ದಾರೆ ಎಂದು ಹೇಳಿದರು.
ಡಾ.ರಾಜೇಂದ್ರ ಅವರು ಬಹಳ ಅನುಕೂಲಸ್ಥ ಕುಟುಂಬಕ್ಕೆ ಸೇರಿದರಾದರೂ ಎಲ್ಲಿಯೂ ಆ ಬಗ್ಗೆ ಗತ್ತು, ಅಹಂ ತೋರಿಸಿಕೊಳ್ಳದೇ ಎಲ್ಲರ ಜೊತೆಯಲ್ಲಿಯೂ ಬೆರೆತವರು. ಈ ಪುಸ್ತಕ ಓದಿದ ಬಳಿಕ ಯಾವ ಸನ್ನಿವೇಶದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಅರಿಯಬಹುದು. ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರೂ ಎಂಬ ಎರಡು ವರ್ಗಗಳಿದ್ದರೂ ಕಾರ್ಮಿಕ ವರ್ಗದಲ್ಲಿ ಸಾಕಷ್ಟು ಸಾಮಾಜಿಕ ನ್ಯೂನ್ಯತೆಗಳಿವೆ. ಅದರಂತೆ ಶ್ರೀಮಂತ ವರ್ಗದಲ್ಲಿ ಸಮಾಜದ ಬಗ್ಗೆ ಮುಕ್ತವಾದ ಚಿಂತನೆ ಮಾಡುವುದಿಲ್ಲ. ಎಲ್ಲರೂ ತತ್ವಾಧಾರಿತ ಜೀವನ ನಡೆಸಿದರೆ, ಸಮಾಜ ತಾನಾಗೇ ಬದಲಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ ಎಂದು ಹೇಳಿದರು.
ಒಂದೊಂದು ಘಟನೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಅವರು ಕೊಡುವ ವಿವರಣೆ ಉತ್ಪ್ರೇಕ್ಷೆಯಾಗಿಲ್ಲ. ಎಲ್ಲರಿಗೂ ನೋವಾಗದ ರೀತಿಯಲ್ಲಿ ವರ್ಣಿಸಿzರೆ. ದುಃಖದ ನೆನಪುಗಳನ್ನು ಹೇಳಿಕೊಂಡಿzರೆ. ಕೊನೆಗೆ ಎರಡು ಕಹಿ ನೆನಪುಗಳನ್ನು ವಿವರಿಸಿzರೆ. ಅವು ಆಪ್ತವಾಗಿ ಓದಿಸಿಕೊಂಡು ಹೋಗುತ್ತವೆ ಎಂದರು.
ಸಾಹಿತಿ ಪ್ರೊ.ಸಿ.ನಾಗಣ್ಣ ಕೃತಿ ಕುರಿತು ಮಾತನಾಡಿದರು. ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಅಧಕ್ಷತೆ ವಹಿಸಿದ್ದರು. ವಿದ್ವಾಂಸ ಡಾ.ಸಿ.ಪಿ.ಕೃಷ್ಣಕುಮಾರ್, ಕೃತಿ ಲೇಖಕ ಡಾ.ಡಿ.ಕೆ.ರಾಜೇಂದ್ರ ಸೇರಿದಂತೆ ಇತರರು ಇದ್ದರು.