ಪಾಂಡವಪುರ: ಚುನಾವಣೆ ಸಮಯದಲ್ಲಿ ಬಂದು ಸುಳ್ಳು ಹೇಳುವವರನ್ನ ದೂರವಿಡಿ. ಕೊಟ್ಟ ಭರವಸೆ ಈಡೇರಿಸುವ, ನುಡಿದಂತೆ ನಡೆದವರಿಗೆ ನಿಮ್ಮ ಆಭಾರಿಯಾಗಿರಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಡಿದರು.
ಪಾಂಡವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೀವೆಲ್ಲರೂ ಕಾರಣ. 138 ಶಾಸಕರು ಸರ್ಕಾರಕ್ಕೆ ಬೆಂಬಲ ಕೊಟ್ಟು ಅಭಿವೃದ್ಧಿ ಮಾಡಲು ಸಹಕಾರ ನೀಡ್ತಿದ್ದಾರೆ ಎಂದರು.
ಚುನಾವಣೆ ಪೂರ್ವದಲ್ಲಿ ಭರವಸೆ ಕೊಡೋದು ಸಹಜ. 2018ರಲ್ಲೂ ಬಿಜೆಪಿ, ಜೆಡಿಎಸ್ ನಮಗಿಂತ ಹೆಚ್ಚು ಭರವಸೆ ಕೊಟ್ಟಿದ್ರು. ಸ್ತ್ರೀಶಕ್ತಿ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ನಾಯಕರು ಹೇಳಿದ್ರು. ನಿಮ್ಮ ಕ್ಷೇತ್ರದ ಶಾಸಕರೇ ಸಚಿವರು ಆಗಿದ್ರು. ಏಳಕ್ಕೆ ಏಳು ಮಂಡ್ಯದಲ್ಲಿ ಜೆಡಿಎಸ್ ನ ಶಾಸಕರು ಗೆದ್ದಿದ್ದರು. ಅವರೇ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಆಗಿದ್ರು. ಅವರ ಅವಧಿಯಲ್ಲಿ ಕೊಟ್ಟ ಭರವಸೆಯನ್ನ ಈಡೇರಿಸಲು ಆಗಲಿಲ್ಲ. ಅವರಿಂದ ನಿಮಗೆ ಆದ ಅನುಕೂಲ ಏನು ಎಂಬುದನ್ನ ಪ್ರಶ್ನೆ ಮಾಡಿಕೊಳ್ಳಿ. ಸಾಲಮನ್ನಾ ಘೋಷಣೆ ಮಾಡಿ, ಹಣ ಬಿಡುಗಡೆ ಮಾಡಲಿಲ್ಲ. 8 ಸಾವಿರ ಕೋಟಿ ಜಿಲ್ಲೆಯ ಅಭಿವೃದ್ಧಿಗೆ ಕೊಡ್ತೀವಿ ಅಂದ್ರು. ನಾವು ಕೊಟ್ಟಿದ್ದನ್ನ ನಿಲ್ಲಿಸಿಬಿಟ್ಟರು ಅಂತಾರೆ. ಅದಕ್ಕೆ ಯಾವುದೇ ದಾಖಲೆ ಇಲ್ಲ ಎಂದು ಕಿಡಿಕಾರಿದರು.
ನಮ್ಮ ಪ್ರಣಾಳಿಕೆಯನ್ನ ಐದು ವರ್ಷದಲ್ಲಿ ಇಂಪ್ಲಿಮೆಂಟ್ ಮಾಡ್ತೇವೆ. ಆದರೆ ಗ್ಯಾರಂಟಿಗಳನ್ನ ಸರ್ಕಾರ ರಚನೆಯಾದ ದಿನವೇ ಅನುಷ್ಠಾನಕ್ಕೆ ತೀರ್ಮಾನಿಸಲಾಯಿತು. ಮೇ ತಿಂಗಳಲ್ಲಿ ನಮ್ಮ ಸರ್ಕಾರ ರಚನೆ ಆಯ್ತು. ಜೂನ್ ತಿಂಗಳಿಂದಲೇ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಕೊಟ್ಟಿದ್ದೇವೆ. ಈ ಸರ್ಕಾರ ಹಿಂದೆಂದೂ ಯಾರು ಕೊಡದ ಯೋಜನೆ ಕೊಟ್ಟಿದೆ ಎಂದು ಹೇಳಿದರು.
ಚುನಾವಣೆ ವೇಳೆ ಬಿಜೆಪಿ, ಜೆಡಿಎಸ್ ಏನೇ ಆಶ್ವಾಸನೆ ಕೊಟ್ಟರೂ ಕೇಳಬೇಡಿ. ರಾಜ್ಯದಲ್ಲಿ 1.80ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 4.36 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ, 4.63 ಲಕ್ಷ ಕುಟುಂಬಗಳು ಗೃಹ ಜ್ಯೋತಿ ಪ್ರಯೋಜನ ಪಡೆದಿದ್ದಾರೆ. ವರ್ಷಕ್ಕೆ 69 ಸಾವಿರ ಕೋಟಿ ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಕೊಡ್ತಿದೆ ಎಂದರು.
ಸತ್ಯ, ಸುಳ್ಳನ್ನ ಒಪ್ಪಿಕೊಳ್ಳುವ ಮನಸ್ಥಿತಿ ಎಲ್ಲರಲ್ಲೂ ಬರಬೇಕು. ಈ ಯೋಜನೆಯ ಫಲಾನುಭವಿಗಳು ನಮ್ಮ ಯೋಜನೆಯನ್ನ ಸ್ಮರಿಸಬೇಕು. ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಬಂಪರ್ ಬಹುಮಾನ. ಈ ಮೂರು ತಾಲ್ಲೂಕಿನಲ್ಲಿ ಬೆಳೆ ಹಾಕದಿದ್ದರೂ ಬೆಳೆ ವಿಮೆ ಸಿಗಲಿದೆ. ಎಕರೆಗೆ 566ರೂ. ಕೊಟ್ಟು ರಿಜಿಸ್ಟರ್ ಮಾಡಿಸಿಕೊಂಡರೆ 9,448 ರೂ. ವಿಮೆ ಕೊಡ್ತೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಘೋಷಿಸಿದರು.
ನಿನ್ನೆ ದೆಹಲಿಗೆ ಹೋಗಿದ್ದೆವು. ಅವರಿಗೆ ಕನಿಷ್ಠ ಕೃತಜ್ಞತೆ ಇದ್ದರೇ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಲಿ. ಬರ ಪರಿಹಾರಕ್ಕೆ ಮನವಿ ಕೊಟ್ಟು 4 ತಿಂಗಳಾಗಿದೆ. ಇದುವರೆಗೂ ಒಂದು ರೂಪಾಯಿಯನ್ನ ಬಿಡುಗಡೆ ಮಾಡಿಲ್ಲ. ಹತ್ತು, ಹಲವಾರು ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಕರ್ನಾಟಕದ ಋಣ ಅವರ ಮೇಲಿದ್ದರೇ ಬೇಗ ಬಿಡುಗಡೆ ಮಾಡಲಿ. ಕೇಂದ್ರ ಕೊಡದಿದ್ದರೂ ನಾವು ರೈತರಿಗೆ 2 ಸಾವಿರ ಕೊಡ್ತಿದ್ದೇವೆ ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ಬಂದು ಮೊಸಳೆ ಕಣ್ಣೀರು ಹಾಕುವವರು, ರೈತರ ಪರ ಅನ್ನೋರು ಉತ್ತಮರ ಯೋಚಿಸಿ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಕೊಟ್ಟರು ಅಭಿವೃದ್ಧಿ ಇಲ್ಲ ಅಂತಾರೆ. ಗ್ಯಾರಂಟಿ ಅವಶ್ಯಕತೆ ಇತ್ತ ಅಂತಾರೆ. ದೇವೇಗೌಡರು, ಯಡಿಯೂರಪ್ಪ ಅವರ ಮೇಲೆ ಜನ ಅಭಿಮಾನ ಇಟ್ಟಿದ್ದಾರೆ. ದೇವೇಗೌಡರ ಬಾಯಲ್ಲಿ ಈ ಮಾತು ಕೇಳಿ ನನಗೆ ಆಶ್ಚರ್ಯ ಆಯ್ತು. ಬರಗಾಲ ಸಮಯದಲ್ಲಿ ಜನರಿಗೆ ಉಪಯುಕ್ತವಾದ ಗ್ಯಾರಂಟಿಗಳು ಅನ್ನೋ ಮಾತು ಹೇಳಬೇಕಿತ್ತು. ನಮ್ಮ ಗ್ಯಾರಂಟಿಗಳು ಜೆಡಿಎಸ್, ಬಿಜೆಪಿಗೆ ಇಷ್ಟ ಇಲ್ಲ. ಉತ್ತರ ಕೊಡುವ ಸಮಯದಲ್ಲಿ ನೀವು ಯೋಚಿಸಿ ಉತ್ತರ ಕೊಡಿ. ಐದು ವರ್ಷ ಈ ಗ್ಯಾರಂಟಿಗಳನ್ನ, ಎಲ್ಲಾ ಯೋಜನೆಗಳನ್ನ ಮುಂದುವರೆಸುತ್ತೇವೆ ಎಂದು ಹೇಳಿದರು.