ಚಾಮರಾಜನಗರ: ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಮಟ್ಟದಲ್ಲಿಯೇ ತಿಳಿವಳಿಕೆ ನೀಡುವುದರಿಂದ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಧ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಂಡುಬರುವ ಮಾನವ ಕಳ್ಳ ಸಾಗಾಣಿಕೆ, ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮಾನವ ಹಕ್ಕುಗಳು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಶಿಕ್ಷಕರು ಸಹ ಮಕ್ಕಳ ಮೇಲಿನ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡಾಗ ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ ಶ್ರೀಧರ ಅವರು ಮಾತನಾಡಿ ಬಾಲ್ಯವಿವಾಹ, ಪೋಕ್ಸೋ ಪ್ರಕರಣ ಹಾಗೂ ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೆಚ್ಚಾಗಿ ಮಹಿಳೆಯರು ಮಕ್ಕಳೇ ಬಲಿಪಶುಗಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ ರಾಯಭಾರಿಗಳಾಗಿ ಸಮಾಜದಲ್ಲಿ ನಡೆಯುವ ಬಾಲ್ಯವಿವಾಹದಂತಹ ಪ್ರಕರಣಗಳ ಬಗ್ಗೆ ಧ್ವನಿ ಎತ್ತಬೇಕು. ಶಿಕ್ಷಕರು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಕ್ಕಳ ಮೇಲೆ ನಡೆಯುವ ಗಂಭೀರ ಪ್ರಕರಣಗಳ ಕುರಿತು ಮನವರಿಕೆ ಮಾಡಿಸಬೇಕು. ಶಿಕ್ಷಣದಿಂದ ಮಹಿಳೆಯರ ಮೇಲಿನ ದೌರ್ಜನ್ಯ ಘಟನೆಗಳನ್ನು ತಪ್ಪಿಸಬಹುದು ಎಂದರು.
ಜಿಲ್ಲಾ ವಕೀಲ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದೂಶೇಖರ್ ಅವರು ಮಾತನಾಡಿ ಮಕ್ಕಳ ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುವ ಹೀನ ಕೃತ್ಯಗಳನ್ನು ತಡೆಯಲು ಎಲ್ಲರೂ ಶ್ರಮಿಸಬೇಕು. ಬಾಲ್ಯವಿವಾಹವು ಸಮಾಜದಲ್ಲಿ ಕಂಡುಬರುವ ಒಂದು ಅನಿಷ್ಟ ಪದ್ಧತಿಯಾಗಿದೆ. ಮಕ್ಕಳ ಹಕ್ಕುಗಳು, ಮಕ್ಕಳ ಕಾನೂನುಗಳನ್ನು ಗೌರವಿಸಬೇಕು ಎಂದು ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗೀತಾಲಕ್ಷ್ಮೀ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸರಸ್ವತಿ, ಪಿ.ಎಂ.ಎಸ್.ಆರ್. ಸಂಸ್ಥೆಯ ಆಡಿಸ್ ಅರ್ನಾಲ್ಡ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಎನ್. ಚೆಲುವರಾಜು, ಕಾನೂನು ಸಲಹೆಗಾರರಾದ ರೂಪಶ್ರೀ, ಮಂಜುಳಾ, ಕಾರ್ಮಿಕ ಇಲಾಖೆಯ ಮಹೇಶ್ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತ ಅರಿವು ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.