Saturday, April 19, 2025
Google search engine

Homeಸ್ಥಳೀಯಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ತಡೆಗೆ ಜಾಗೃತಿ ಅಗತ್ಯ

ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ತಡೆಗೆ ಜಾಗೃತಿ ಅಗತ್ಯ

ಚಾಮರಾಜನಗರ: ಬಾಲ್ಯ ವಿವಾಹ ನಿಷೇಧ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರು ಅರಿತುಕೊಂಡಾಗ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯಗಳು ಹಾಗೂ ಅಪರಾಧಗಳನ್ನು ತಡೆಯಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಎಸ್. ಭಾರತಿ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಪಿ.ಎಂ.ಎಸ್.ಆರ್. ಸಂಸ್ಥೆ, ಚೈಲ್ಡ್‍ರೈಟ್ಸ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕ ವಯಸ್ಸಿನಲ್ಲಿಯೇ ಗಂಡು ಅಥವಾ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಅಪರಾಧವಾಗಿದೆ. ಚಿಕ್ಕ ವಯಸ್ಸಿನ ಮದುವೆಯಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಮದುವೆ ಮಾಡಬಾರದು. ಮಕ್ಕಳ ಹಕ್ಕುಗಳಿಗೆ ಧಕ್ಕೆ ತರಬಾರದು. ಮಕ್ಕಳ ಮೇಲೆ ನಡೆಯುವ ಯಾವುದೇ ರೀತಿಯ ದುರ್ಘಟನೆಗಳಿಗೆ ಅವಕಾಶ ನೀಡದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಬಾಲ್ಯ ವಿವಾಹ ಮಾಡುವುದರಿಂದ ಆಗುವ ಗಂಭೀರ ಪರಿಣಾಮಗಳನ್ನು ತಿಳಿಸಿಕೊಡಬೇಕು. ಎಲ್ಲಿಯೇ ಆಗಲಿ ಬಾಲ್ಯ ವಿವಾಹ ನಡೆಯಲಿರುವುದು ಕಂಡುಬಂದರೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಅನಗತ್ಯ ವಿಷಯಗಳಿಗೆ ಗಮನಹರಿಸದೆ ಶಿಕ್ಷಣದತ್ತ ಕೇಂದ್ರೀಕರಿಸಬೇಕು. ಮೊಬೈಲ್ ಫೋನ್ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ದೂರವಿಡಬೇಕು. ಉತ್ತಮ ಪ್ರಜೆಗಳಾಗಿ ಉನ್ನತ ಮಟ್ಟದಲ್ಲಿ ಬೆಳೆಯಲು ಕನಸು ಕಾಣಬೇಕು ಎಂದು ಸಲಹೆ ಮಾಡಿದರು. ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಸರಸ್ವತಿ ಅವರು ಮಾತನಾಡಿ ಬಾಲ್ಯ ವಿವಾಹದ ಬಗ್ಗೆ ಪೋಷಕರು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ತುಂಬಾ ಅವಶ್ಯಕವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ವ್ಯಾಸಂಗಕ್ಕೆ ಪ್ರಾಸಶ್ತ್ಯ ನೀಡಬೇಕು. ಉತ್ತಮ ಭವಿಷ್ಯದ ಕಡೆ ಗಮನವಹಿಸಿ ಉನ್ನತ ಸ್ಥಾನಗಳನ್ನು ಏರಲು ಉತ್ತೇಜಿಸಬೇಕು ಎಂದರು. ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕರಾದ ನಾಗಸಿಂಹ ಜಿ. ರಾವ್ ಅವರು ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಸಮಗ್ರ ಅಧ್ಯಯನ ಅವಶ್ಯಕವಾಗಿದೆ. ಮಕ್ಕಳ ರಕ್ಷಣೆಯಲ್ಲಿ ವಿಶ್ವ ಸಂಸ್ಥೆ, ಮಕ್ಕಳ ನ್ಯಾಯ ಮಕ್ಕಳ ರಕ್ಷಣೆ ಮತ್ತು ಪೋಷಣೆ, ಪೋಕ್ಸೊ ಕಾಯ್ದೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಬದುಕುವ, ರಕ್ಷಣೆ, ಅಭಿವೃದ್ದಿ ಹೊಂದುವುದು ಸೇರಿದಂತೆ ಹಲವು ಹಕ್ಕುಗಳು ಇವೆ. ವಿದ್ಯಾರ್ಥಿಗಳು, ಪೋಷಕರು ಜಾಗೃತರಾದಾಗ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಬಾಲ್ಯ ವಿವಾಹದಂತಹ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಉಪ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಮಕ್ಕಳ ಕಲ್ಯಾಣಾಧಿಕಾರಿಯಾದ ಅನ್ಸರ್ ಆಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಜಿಲ್ಲಾ ಕಾರ್ಮಿಕಾಧಿಕಾರಿ ಎಂ. ಸವಿತಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸರಸ್ವತಿ, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆಯ ವೆಂಕಟೇಶ್, ಪಿ.ಎಂ.ಎಸ್.ಆರ್ ಸಂಸ್ಥೆಯ ಆದಿಕೇಶ, ವೀಣಾ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಬೃಹತ್ ವಾಕಾಥಾನ್ ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬಿ.ಎಸ್. ಭಾರತಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಚಾಲನೆ ನೀಡಿದರು.

RELATED ARTICLES
- Advertisment -
Google search engine

Most Popular