ಚಿತ್ರದುರ್ಗ: ಪರಿಸರ ಸ್ವಚ್ಛತೆಯ ಮೂಲಕ ಕೀಟಜನ್ಯ ರೋಗಗಳನ್ನು ನಿಯಂತ್ರಿಸೋಣ ಎಂದು ಜಿಲ್ಲಾ ರೋಗವಾಹಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಹೇಳಿದರು.
ಚಿತ್ರದುರ್ಗ ನಗರ ಸಮೀಪದ ಆಶ್ರಯ ಬಡಾವಣೆಯ ಸುತ್ತಮುತ್ತ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಗರಸಭೆ ಸಹಯೋಗದೊಂದಿಗೆ ವಿಶ್ವ ಸೊಳ್ಳೆ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ಮನುಷ್ಯನ ದುಡಿದ ದೇಹವು ರಾತ್ರಿಯಾದೊಡನೆ ವಿಶ್ರಾಂತಿ ಬಯಸುತ್ತದೆ. ಆದರೆ ಇಂತಹ ಅಗತ್ಯವಾದ ವಿಶ್ರಾಂತಿ ಹೊಂದುತ್ತಿರುವಾಗ ಸೊಳ್ಳೆಗಳು ಕಿವಿಯ ಹತ್ತಿರ ಗುಯ್ಗುಡುತ್ತ ಬಂದು ಕಚ್ಚತೊಡಗಿದರೆ ವಿಶ್ರಾಂತಿಗೆ ಭಂಗ ಉಂಟಾಗುತ್ತದೆ. ಹೀಗೆ ಮನುಜನಿಗೆ ಕೇಡನ್ನು ಉಂಟುಮಾಡುವ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೊಳ್ಳೆಗಳ ಕಡಿತ ತಪ್ಪಿಸಿಕೊಳ್ಳುವ ವಿಧಾನದ ಅರಿವು ಮೂಡಿಸುವುದಕ್ಕಾಗಿ ಪ್ರತಿವರ್ಷ ಆಗಸ್ಟ್ 20ರಂದು ವಿಶ್ವ ಸೊಳ್ಳೆಗಳ ದಿನವೆಂದು ಆಚರಿಸಲಾಗುತ್ತದೆ ಎಂದರು.
ಸೊಳ್ಳೆಗಳು ನಿಂತ ನೀರಿನಲ್ಲಿ ಮಾತ್ರ ಮೊಟ್ಟೆ ಇಡುತ್ತವೆ. ಮಳೆಗಾಲದಲ್ಲಿ ಹರಿದು ಹೋಗುವ ನೀರಿನಲ್ಲಿ ಇವು ಮೊಟ್ಟೆ ಇಡುವುದಿಲ್ಲ. ಕೊಳಗಳಲ್ಲಿ ತುಂಬಿಕೊಳ್ಳುವ ನೀರಿನಲ್ಲಿ ಮೊಟ್ಟೆ ಇಟ್ಟು ಸಂತತಿ ಹೆಚ್ಚಿಸಿಕೊಳ್ಳುತ್ತವೆ. ಆದುದರಿಂದ ಸೊಳ್ಳೆಗಳ ಸಂತಾನೋತ್ಪತಿ ತಡೆಯಲು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ತೆಂಗಿನ ಚಿಪ್ಪು, ಬಳಸಲ್ಪಟ್ಟ ಟಯರ್ ಇವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆಯ ಬದಿಯಲ್ಲಿ ಎಸೆಯಬಾರದು. ತಾರಸಿಯಲ್ಲಿ ನೀರಿನ ಕುಂಡದಲ್ಲಿ ನೀರು ನಿಲ್ಲದಂತೆ ಜಾಗೃತಿವಹಿಸಬೇಕು. ನೀರಿನ ಟ್ಯಾಂಕ್, ತೊಟ್ಟಿಗಳನ್ನು ಮುಚ್ಚಿಡಬೇಕು. ಪಾತ್ರೆಗಳಲ್ಲಿ ಇರುವ ನೀರನ್ನು ಪ್ರತಿ ದಿವಸವು ಬದಲಾಯಿಸಬೇಕು. ಎಲ್ಲ ಸೊಳ್ಳೆಗಳು ಕಚ್ಚುವುದಿಲ್ಲ. ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಕಚ್ಚುತ್ತವೆ ಎಂದರು.
ಪ್ರೋಬೇಷನರಿ ತಹಶೀಲ್ದಾರ್ ಆರ್. ಪ್ರತಿಭಾ ಮಾತನಾಡಿ, ಸೊಳ್ಳೆಗಳ ಕಡಿತ ತಪ್ಪಿಸಿಕೊಳ್ಳಲು ಸಂಪೂರ್ಣವಾಗಿ ಮೈಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ರಾತ್ರಿ ಮಲಗುವ ಮುನ್ನ ಕೋಣೆಯಲ್ಲಿ ಸೊಳ್ಳೆ ಕಾಯ್ಲ್, ಸೊಳ್ಳೆ ಅಗರಬತ್ತಿ ಉರಿಸಿ, ಸೊಳ್ಳೆಗಳು ಹೊರಗೆ ಹೋದ ಅನಂತರ ಕಿಟಕಿ ಬಾಗಿಲು ಹಾಕಿಕೊಳ್ಳಬೇಕು. ದನದ ಕೊಟ್ಟಿಗೆಗಳಲ್ಲಿ ರಾತ್ರಿಯ ವೇಳೆ ಹೊಗೆ ಹಾಕುವುದರಿಂದಲೂ ಸೊಳ್ಳೆಗಳ ಕಾಟ ನಿಯಂತ್ರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್ ರೆಡ್ಡಿ, ಶ್ರೀಧರ್, ಮಲ್ಲಿಕಾರ್ಜುನ್, ನಾಗರಾಜ್, ಬಳಲಿ ಶ್ರೀನಿವಾಸ್, ಡಾ.ಯಶಸ್, ಡಾ.ಸೀಮಾ, ನಗರಸಭೆ ತಾಂತ್ರಿಕ ಅಧಿಕಾರಿ ಜಾಫರ್, ಶಿಕ್ಷಕ, ರುದ್ರಪ್ಪ, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದದ ಸದಸ್ಯರು ಇದ್ದರು.