ಲಕ್ನೋ: ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬಂದಿರುವ ಇ-ಮೇಲ್ ಬೆದರಿಕೆಯಿಂದ ಅಧಿಕಾರಿಗಳು ಅಲರ್ಟ್ ಆಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಈ ಬೆದರಿಕೆ ಮೇಲ್ ಅನ್ನು ರಾಮ ಜನ್ಮಭೂಮಿ ಟ್ರಸ್ಟ್ ಏಪ್ರಿಲ್ 14ರ ರಾತ್ರಿ ಸ್ವೀಕರಿಸಿದ್ದು, ತಕ್ಷಣವೇ ಅಯೋಧ್ಯೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಾಂಬ್ ಬೆದರಿಕೆಗೆ ಹಿನ್ನೆಲೆ, ದೇವಸ್ಥಾನ ಸುತ್ತಮುತ್ತ ಹಾಗೂ ಶಂಕಾಸ್ಪದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೇ ಅಯೋಧ್ಯೆ, ಬಾರಾಬಂಕಿ ಮತ್ತು ಪರಸ್ಪರ ಜಿಲ್ಲೆಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಪೊಲೀಸ್ ಪಡೆ ಹೆಚ್ಚಿನ ಎಚ್ಚರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಅನಾಹುತಕ್ಕೆ ಅವಕಾಶ ನೀಡದಂತೆ ತಕ್ಷಣ ಕ್ರಮ ಕೈಗೊಂಡಿದೆ.
ಇ-ಮೇಲ್ ಕುರಿತಾದ ದೂರನ್ನು ರಾಮ ಜನ್ಮಭೂಮಿ ಟ್ರಸ್ಟ್ ನ ಅಧಿಕಾರಿ ಮಹೇಶ್ ಕುಮಾರ್ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ, ಇ-ಮೇಲ್ ಮೂಲ ಮತ್ತು ಕಳುಹಿಸಿದ ವ್ಯಕ್ತಿಯ ಸುಳಿವಿಗಾಗಿ ಡಿಜಿಟಲ್ ಪಠ್ಯವಿಶ್ಲೇಷಣೆ ಮತ್ತು ತಾಂತ್ರಿಕ ತನಿಖೆಗೆ ಮುಂದಾಗಿದೆ.
ರಾಮಮಂದಿರ 2024ರಲ್ಲಿ 135.5 ಮಿಲಿಯನ್ ಭಕ್ತರ ಭೇಟಿ ದಾಖಲಿಸಿದ್ದು, ಇದು ತಾಜ್ ಮಹಲ್ ಗೆ ಭೇಟಿ ನೀಡಿದ ಸಂಖ್ಯೆಯನ್ನು ಮೀರಿಸಿದೆ. ಈ ಹಿನ್ನೆಲೆಯಲ್ಲಿ, ಭದ್ರತೆ ಮತ್ತಷ್ಟು ಹೆಚ್ಚಳವಾಗಿದೆ. ಈ ಬೆದರಿಕೆ ಪ್ರಕರಣವು ಭಕ್ತರಲ್ಲಿ ಆತಂಕ ಉಂಟುಮಾಡಿದ್ದು, ಅಧಿಕಾರಿಗಳಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.