ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಬಡಾವಣೆಯ ನಿವಾಸಿಗಳು ಅಯೋಧ್ಯಾ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಂಜೆ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಭಜನೆ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶ್ರೀರಾಮ ತಾರಕ ಮಂತ್ರದ ಸಾಮೂಹಿಕ ಜಪವನ್ನು ಮಾಡಿ ಪ್ರಸಾದ ವಿನಿಯೋಗ ನಡೆಸಿದರು.
ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಣೇಶ್ ಮಾತನಾಡಿ ಅಯೋಧ್ಯೆಗೂ ಮೈಸೂರಿಗೂ ಈಗ ಬಹಳ ನಂಟಾಗಿದೆ. ಶಿಲೆ, ಶಿಲ್ಪಿ ಎಲ್ಲಾ ಮೈಸೂರು ಜೆಲ್ಲೆಯದ್ದಾಗಿದೆ. ಸತತ 500 ವರ್ಷಗಳ ಭಕ್ತಿಯ ಹೋರಾಟ ಹಾಗೂ ಕಾಯುವಿಕೆ ಇಂದು ಅಂತ್ಯವಾಗಿದೆ, ಶ್ರೀರಾಮ ದೇವರ ಭಕ್ತರಾದ ನಾವು ಸತ್ಯ ಧರ್ಮ ನಿಷ್ಠೆ ತ್ಯಾಗಗಳನ್ನು ನಮ್ಮಲ್ಲಿ ಒಳಗೂಡಿಸಿಕೊಂಡಾಗ ಮಾತ್ರ ನಮ್ಮ ರಾಮ ಭಕ್ತಿ ಪ್ರಕಾಶಮಾನವಾಗುತ್ತದೆ ಎಂದು ಹೇಳಿದರು.
ಕಾರ್ಯದರ್ಶಿ ಪುನೀತ್ ಶ್ರೀರಾಮನ ಆದರ್ಶಗಳ ಬಗ್ಗೆ ಮಾತನಾಡಿ ಅಯೋಧ್ಯೆ, ಮಥುರಾ,ಕಾಶಿ, ಕಂಚಿ, ಹರಿದ್ವಾರ,ದ್ವಾರಕಾ,ಉಜ್ಜಯಿನಿ ನಮ್ಮ ಮೋಕ್ಷದಾಯಕ ಕ್ಷೇತ್ರಗಳು ಅದರಲ್ಲಿ ಇಂದು ಪರಮ ಪವಿತ್ರ ಅಯೋಧ್ಯೆ ಪ್ರದೇಶವು ನಮಗೆ ಮರು ಲಭಿಸಿರುವುದು ಪುಣ್ಯ ಎಂದು ತಿಳಿಸಿದರು.
ನಾಗಭೂಷಣ್ ಆಚಾರ್ ರವರು ಶ್ರೀರಾಮಮಂದಿರದ ಹೋರಾಟದ ವಿಚಾರಗಳನ್ನು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಸೇರಿದಂತೆ ಈ ಸಂದರ್ಭದಲ್ಲಿ ಬಡಾವಣೆಯ ಎಲ್ಲಾ ನಿವಾಸಿಗಳು ಹಾಜರಿದ್ದರು.