ಚಿತ್ರದುರ್ಗ: ಆಯುರ್ವೇದವು ಭಾರತದ ವೈದ್ಯ ಪದ್ಧತಿಯಾಗಿದ್ದು, ಇಂದು ವಿಶ್ವದಾದ್ಯಂತ ಜನಮನ್ನಣೆ ಪಡೆದುಕೊಂಡಿದೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ತಿಳಿಸಿದರು. ಚಳ್ಳಕೆರೆ ತಾಲ್ಲೂಕಿನ ಪೆತ್ತಮ್ಮರಹಟ್ಟಿಯಲ್ಲಿ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ ಆಯುಷ್ ಸೇವಾ ಗ್ರಾಮ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ವೈದ್ಯ ಪದ್ಧತಿಯಲ್ಲಿ ಕಾಯಿಲೆಯನ್ನು ಗುಣಪಡಿಸುವುದರ ಜೊತೆಗೆ ದೇಹವು ಸದೃಢವಾಗುವಂತೆ ಚಿಕಿತ್ಸೆಯನ್ನು ನೀಡಲಾಗುವುದು. ಇಂದಿನಿಂದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಊರಿಗೆ ವೈದ್ಯರು ನಿಯಮಿತವಾಗಿ ಆಗಮಿಸಿ ಚಿಕಿತ್ಸೆಯನ್ನು ನೀಡುವರು. ಈ ಕಾರ್ಯಕ್ರಮದ ಪ್ರಯೋಜನವ ತಾವೆಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಜನರು ಪ್ರಾಥಮಿಕವಾಗಿ ಮನೆ ಮದ್ದುಗಳಲ್ಲಿ ಚಿಕಿತ್ಸೆಯನ್ನು ಮನೆಯಲ್ಲೇ ಪಡೆದುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಕಾಯಿಲೆಯನ್ನು ಕೇವಲ ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲ, ಔಷಧದೊಂದಿಗೆ ಮನೆಮದ್ದು, ಪಥ್ಯ ಜೀವನಶೈಲಿ ಇವುಗಳನ್ನು ರೂಡಿಸಿಕೊಂಡಲ್ಲಿ ಮಾತ್ರ ಪರಿಪೂರ್ಣ ಆರೋಗ್ಯ ನಿಮ್ಮದಾಗುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಅವಶ್ಯಕವಿರುವ ನೈರ್ಮಲ್ಯ, ಮನೆಮದ್ದು ,ಪಥ್ಯ, ಯೋಗ ಆಹಾರ ಪದ್ಧತಿ ಇವೆಲ್ಲವುಗಳನ್ನು ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ವೈದ್ಯರು ನಿಮ್ಮ ಊರಿಗೆ ಬಂದು ತಿಳಿಸಿಕೊಡಲಿದ್ದಾರೆ ಹಾಗೂ ಉಚಿತ ಆರೋಗ್ಯ ತಪಾಸಣೆ, ಔಷಧಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಆಯುಷ್ ಇಲಾಖೆಯ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ನನ್ನಿವಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ರಾಜಣ್ಣ, ಉಪಾಧ್ಯಕ್ಷ ಬಿಬಿ ಜಾನ್, ಗ್ರಾಮ ಪಂಚಾಯತಿ ಸದಸ್ಯ ದೊರೆ ಬೈಯಣ್ಣ, ಸಣ್ಣ ಬೋರಮ್ಮ, ಓ. ಚಿನ್ನಯ್ಯ, ಓ.ಓಬಯ್ಯ, ಸೈಯದ್ ಸಮಿವುಲ್ಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಲಯ್ಯ, ಆಯುಷ್ ಇಲಾಖೆಯ ವೈಧ್ಯಾಧಿಕಾರಿಗಳಾದ ಡಾ.ಕುಮಾರಸ್ವಾಮಿ, ಡಾ. ಪ್ರಭು, ಡಾ.ಉದಯ, ಭಾಸ್ಕರ್, ಡಾ.ಅನಿಲ್‍ಕುಮಾರ್, ಡಾ.ಕಲ್ಪನಾ, ಡಾ.ರಘುವೀರ್, ಡಾ.ಸರಸ್ವತಿ, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು. ಭಾಗವಹಿಸಿದ್ದರು.