ಶಿವಮೊಗ್ಗ: ಪೇಜಾವರ ಶ್ರೀಗಳ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಟೀಕೆ ಸರಿಯಲ್ಲ, ಈ ಕುರಿತು ಶ್ರೀಗಳ ಬಳಿ ಕ್ಷಮೆ ಯಾಚಿಸಲಿ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಆಗ್ರಹಿಸಿದ್ದಾರೆ.
ಸರಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿ ಗಣತಿ ಎನ್ನುತ್ತೀರಿ. ಈ ಜಾತಿ ಗಣತಿ ಏಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀಡಿದ ಹೇಳಿಕೆ ಸಮಂಜಸವಾಗಿದೆ. ಆದರೆ ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಬಿ.ಕೆ. ಹರಿಪ್ರಸಾದ್ ಕೊಟ್ಟ ಹೇಳಿಕೆ ಖಂಡನೀಯ.
ಪೇಜಾವರ ಶ್ರೀಗಳು ಹೇಳಿರುವ ವಿಷಯ, ಮಾತು ಸರಿಯಾಗಿಯೇ ಇದೆ. ನಾವು ತಪ್ಪು ಮಾಡಿದಾಗ ತಿದ್ದಿ ಹೇಳುವ ಕಾರ್ಯವನ್ನು ಗುರುಗಳು ಮಾಡುತ್ತಿದ್ದಾರೆ ಎಂದು ಡಾ| ಸರ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.