Thursday, April 3, 2025
Google search engine

Homeರಾಜ್ಯಸುದ್ದಿಜಾಲಬಿ-ಖಾತಾ ಆದೇಶ: ನನ್ನ ಹೋರಾಟಕ್ಕೆ ಸಂದ ಜಯ: ಶಾಸಕ ಜಿ.ಡಿ.ಹರೀಶ್ ಗೌಡ

ಬಿ-ಖಾತಾ ಆದೇಶ: ನನ್ನ ಹೋರಾಟಕ್ಕೆ ಸಂದ ಜಯ: ಶಾಸಕ ಜಿ.ಡಿ.ಹರೀಶ್ ಗೌಡ

ಹುಣಸೂರು: ಇ- ಖಾತಾ ಕುರಿತಂತೆ ನಾನು ಸದನದಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್‌ ಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೨೩ರ ಜುಲೈ ೧೪ರಂದು ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ನಾನು ಕೇಳಿದ್ದ ಚುಕ್ಕಿ ಪ್ರಶ್ನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಇ-ಖಾತಾವನ್ನು ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ ನಾಡಿನ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ ಇದ್ದ ೮೧ ಅನಧಿಕೃತ ಬಡಾವಣೆಗಳಿಗೆ ಸಂಬಂಸಿದಂತೆ ಮೂಲಸೌಕರ್ಯ ಒದಗಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಅಲ್ಲದೆ, ಈ ಬಡಾವಣೆಗಳನ್ನು ಸರ್ಕಾರ ಸಕ್ರಮಗೊಳಿಸಿ, ಅಲ್ಲಿನ ನಿವಾಸಿಗಳ ಬವಣೆಯನ್ನು ತಪ್ಪಿಸುವಂತೆಯೂ ಮತ್ತು ಇ- ಖಾತಾವನ್ನು ನೀಡುವಂತೆ ಪ್ರಶ್ನೆ ಕೇಳಲಾಗಿತ್ತು. ಇದನ್ನು ಪರಿಗಣಿಸಿದ ಸರ್ಕಾರ ೨೦೨೩ರ ಆಗಸ್ಟ್‌ ೨೫ರಂದು ಅಕ್ರಮ ಬಡಾವಣೆ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಕಾಯಿದೆಗೆ ತಿದ್ದುಪಡಿ ತರಲು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲಾಗಿತ್ತು. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಯಾವುದೂ ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದವರು ವಿವರಿಸಿದರು.

ನಂತರ ನಡೆದ ೨೦೨೩ರ ಡಿಸೆಂಬರ್‌ ೧೫ರಂದು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಚುಕ್ಕಿ ಪ್ರಶ್ನೆ ಮೂಲಕ ನಾನು ಇದೇ ವಿಚಾರವನ್ನು ಪ್ರಶ್ನೆ ಮಾಡಿದ್ದೆ. ನಾನು ಪ್ರಸ್ತಾಪಿಸಿ ವಿಷಯದ ಗಂಭೀರತೆಯನ್ನು ಅರಿತ ಹಿರಿಯ ಶಾಸಕರು ನನಗೆ ದನಿಗೂಡಿಸಿದ್ದರು. ಇದರಿಂದ ಎಚ್ಚತ್ತ ಸರ್ಕಾರ ಅನಧಿಕೃತ ಹಾಗೂ ಅಕ್ರಮ ಆಸ್ತಿಯ ಕುರಿತು ಅಧ್ಯಯನ ನಡೆಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿತು ಎಂದವರು ಪ್ರಸ್ತಾಪಿಸಿದ್ದಾರೆ.
ನಂತರ ಸಂಪುಟ ಸಚಿವರ ಸಮಿತಿಯು ಸುಧೀರ್ಘ ಅಧ್ಯಯನ ನಡೆಸಿ ನೀಡಿದ ವರದಿಯನ್ನು ಸರ್ಕಾರ ಪರಿಗಣಿಸಿದ್ದು, ಅದನ್ನು ಜಾರಿಗೆ ತರುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಮಂಗಳವಾರ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಅಕ್ರಮ ಬಡಾವಣೆಗಳಿಗೆ ಬಿ- ಖಾತಾ ನೀಡುವ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗಾಗಿ ಮುಗಿಸುವಂತೆ ಕಟ್ಟನಿಟ್ಟಿನ ಸೂಚನೆ ನೀಡಿದ್ದಾರೆ.

ಇದರಿಂದ ನಾಡಿನ ಲಕ್ಷಾಂತರ ಬಡಜನತೆಗೆ ಅನುಕೂಲವಾಗಿದ್ದು, ಆ ಎಲ್ಲ ಬಡ ಜನರ ಪರವಾಗಿ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ ಎಂದವರು ತಿಳಿಸಿದ್ದಾರೆ. ಹುಣಸೂರು ಕ್ಷೇತ್ರದ ಶಾಸಕನಾಗಿ ನಾನು ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಅಕ್ರಮ ಆಸ್ತಿಯನ್ನು ಸಕ್ರಮಗೊಳಿಸುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಪದೇ ಪದೇ ಮಂಡಿಸಿರುತ್ತೇನೆ. ಇದೊಂದು ಗಂಭೀರ ವಿಚಾರ ಎಂಬುದು ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಕ್ಷೇತ್ರದ ಜನತೆಯ ಜೊತೆಗೆ ಇಡೀ ರಾಜ್ಯದ ಜನತೆಗೆ ಇದರಿಂದ ಅನುಕೂಲವಾಗಿರುವುದು ನನ್ನ ಸಾರ್ವಜನಿಕ ಜೀವನದಲ್ಲಿ ಸಂತಸದ ಕ್ಷಣವೆಂದು ಭಾವಿಸುತ್ತೇನೆ. ಇದರಿಂದ ಜನರಿಗೆ ಹೆಚ್ಚಿನ ಸೇವೆ ಮಾಡುವ ಉತ್ಸಾಹ ಹೆಚ್ಚಾಗಿದೆ. ಅದಕ್ಕಾಗಿ ಕ್ಷೇತ್ರದ ಜನತೆಗೆ ನಾನು ಋಣಿಯಾಗಿರುತ್ತೇನೆ. ಇದರಿಂದ ಹಲವಾರು ದಶಕಗಳಿಂದ ಹುಣಸೂರು ಪಟ್ಟಣದ ಜನತೆಯನ್ನು ಕಾಡುತ್ತಿದ್ದ ಸಮಸ್ಯೆಯೊಂದು ಬಗೆಹರಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular