ನವದೆಹಲಿ: ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಬಿ.ಆರ್. ಗವಾಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ನ್ಯಾಯಮೂರ್ತಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಗವಾಯಿ ಅವರು ಈ ವರ್ಷ ನವೆಂಬರ್ 23ರಂದು ನಿವೃತ್ತಿ ಹೊಂದಲಿದ್ದಾರೆ.
ಗವಾಯಿ ಅವರು ಕೆ.ಜಿ. ಬಾಲಕೃಷ್ಣನ್ ಅವರ ನಂತರ ಸಿಜೆಐ ಸ್ಥಾನ ಅಲಂಕರಿಸುತ್ತಿರುವ ದಲಿತ ಸಮುದಾಯದ ವ್ಯಕ್ತಿಯಾಗಿದ್ದಾರೆ. ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂಜೀವ್ ಖನ್ನಾ ಅವರು ಮಂಗಳವಾರ ನಿವೃತ್ತಿ ಹೊಂದಿದರು. ಇದೀಗ ಅವರ ಸ್ಥಾನಕ್ಕೆ ಬಿ.ಆರ್ ಗವಾಯಿ ನೇಮಕಗೊಂಡಿದ್ದಾರೆ.
ಬಿ.ಆರ್. ಗವಾಯಿ ಅವರು 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ನಡೆಸಿದರು. ನಂತರ ಅವರು ನಾಗುರ ಪೀಠದಲ್ಲಿ ವಕೀಲ ವೃತ್ತಿ ನಡೆಸಿದರು. 2003ರ ನವೆಂಬರ್‌ನಲ್ಲಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2005ರಲ್ಲಿ ಕಾಯಂ ನ್ಯಾಯಮೂರ್ತಿ ಆದರು. 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯಾಗಿ ಪದೋನ್ನತಿ ಹೊಂದಿದರು.