ಯಳಂದೂರು: ತಾಲೂಕಿನ ಅಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ. ವೆಂಕಟಾಚಲ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿ ಮುದ್ದುನಾಯಕ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇದಕ್ಕೆ ಸೋಮವಾರ ಚುನಾವಣೆ ನಿಗಧಿಯಾಗಿತ್ತು. ಪರಿಶಿಷ್ಟ ಪಂಗಡ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿ. ವೆಂಕಟಾಚಲ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆಯ ಶಿವರಂಜನಿ ಬಿ. ವೆಂಕಟಾಚಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಬಿ. ವೆಂಕಟಾಚಲ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ಒಟ್ಟು ೧೨ ಮಂದಿ ಸದಸ್ಯರು ಇದ್ದಾರೆ. ನನಗೆ ಎಲ್ಲರೂ ಸಹ ಅಧ್ಯಕ್ಷರಾಗುವಂತೆ ಮನವೊಲಿಸಿ ತಮ್ಮ ಸಹಕಾರವನ್ನು ನೀಡಿದ್ದಾರೆ. ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಗಳಲ್ಲಿ ಅಗರವೂ ಒಂದಾಗಿದೆ. ಈ ಗ್ರಾಮವು ಕಟ್ನವಾಡಿ, ಕಿನಕಹಳ್ಳಿ ಹಾಗೂ ಅಗರ ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿಗೆ ನೀರು, ಚರಂಡಿ, ರಸ್ತೆ ಹಾಗೂ ಗ್ರಾಮಗಳ ಶುಚಿತ್ವಕ್ಕೆ ನನ್ನ ಅವಧಿಯಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ. ಗ್ರಾಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜನರ ಸಮಸ್ಯೆಗಳನ್ನು ಆಲಿಸಿ ಮೂಲ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪಂಚಾಯಿತಿಯಲ್ಲಿ ವೈಯುಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಮಾಡುಲು ಉತ್ತೇಜನ ನೀಡಲು ನಾನು ಬದ್ಧನಾಗಿದ್ದೇನೆ.
ನಾನು ಅಧ್ಯಕ್ಷನಾಗಲು ಸಹಕರಿಸಿದ ನನ್ನ ಸಹ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು,ಗ್ರಾಮಸ್ಥರು, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ನೂತನ ಅಧ್ಯಕ್ಷರನ್ನು ಭೇಟಿಯಾಗಿ ಅಭಿನಂದನೆಯನ್ನು ಸಲ್ಲಿಸಿದರು. ಉಪಾಧ್ಯಕ್ಷೆ ನಿರ್ಮಲ ಸದಸ್ಯರಾದ ಮುದ್ದನಾಯಕ, ಸುರೇಶ, ಶೋಭಾ, ನಳಿನಕುಮಾರಿ, ಅನ್ನಪೂರ್ಣ, ಎಚ್. ಕುಮಾರ, ರಾಜಮ್ಮ, ಎನ್. ನಾಗರಾಜು, ಟಿ.ಎಲ್.ರಾಣಿ, ಆರ್. ಸ್ವಾಮಿ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಜು ತಾಪಂ ಮಾಜಿ ಅಧ್ಯಕ್ಷರಾದ ವೆಂಕಟೇಶ್, ರಾಮಚಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ರಮೇಶ್, ರಾಚಪ್ಪ, ಚಂಗುಮಣಿ, ನಾರಾಯಣಸ್ವಾಮಿ, ಬಸವಣ್ಣ, ಲಿಂಗರಾಜು ಪಿಡಿಒ ಉಷಾರಾಣಿ, ಕೆ.ಎಸ್. ಮಂಜುನಾಥ್ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಇದ್ದರು.