ರಾಮನಗರ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಒಂದು ಹೊಸ ಜಗತ್ತಿಗೆ ಪ್ರವೇಶಿಸಿದಂತೆ ಎಂದು ವಿಚಾರವಾದಿ ಮಲ್ಲಿಕಾರ್ಜುನ್ ಅವರು ತಿಳಿಸಿದರು. ಅವರು ಇಂದು ಕನಕಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸುವುದಕ್ಕೆ ಹೋರಾಟ ಮಾಡಿದರು.ಸಮಾಜದಲ್ಲಿನ ಮೇಲುಕೀಳು ಎಂಬ ತಾರತಮ್ಯವನ್ನು ತೊರೆದು ಹೆಚ್ಚು ವಿದ್ಯಾಭ್ಯಾಸ ಮಾಡಿ ಕಾನೂನಿ ಬಗ್ಗೆ ತಿಳಿದುಕೊಳ್ಳುವಂತೆ ತಿಳಿಸಿದರು.ಡಾ. ಬಿ.ಆರ್.ಅಂಬೇಡ್ಕರ್ ಅವರು ಅತಿ ಹೆಚ್ಚು ಕಾಲವನ್ನು ಓದಲು ಕಳೆಯುತ್ತಿದ್ದರು.ಅದನ್ನು ವಿದ್ಯಾರ್ಥಿಗಳು ಅನುಸರಿಸುವಂತೆ ತಿಳಿಸಿದರು.ಅವರು ಶೋಷಿತರ ಧ್ವನಿಯಾಗಿ ತಮ್ಮ ಜೀವನವನ್ನು ಸಮರ್ಪಿಸಿ ಬೇರೆಯವರಿಗೆ ದಾರಿದೀಪವಾದರು ಎಂದು ತಿಳಿಸಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ನ್ಯಾಯಾಲಯಗಳ ಪರಿಕಲ್ಪನೆಯನ್ನು ತೆಗೆದುಕೊಂಡು ಎಲ್ಲಾ ನ್ಯಾಯಾಂಗವನ್ನು ಭಾರತದಲ್ಲಿ ಪ್ರಾರಂಭಿಸಿದರು. ಈಸ್ಟ್ ಇಂಡಿಯಾ ಕಂಪನಿಯ ನಾಣ್ಯಗಳು ಚಲಾವಣೆಯಲ್ಲಿದ್ದಾಗ ಆರ್.ಬಿ.ಐ ಅನ್ನು ಸ್ಥಾಪಿಸುವ ಮೂಲಕ ಭಾರತ ದೇಶಕ್ಕೆ ತನ್ನದೇ ಆದಂತಹ ಅರ್ಥಶಾಸ್ತ್ರವನ್ನು ಕಲ್ಪಿಸಿಕೊಟ್ಟರು. ಪ್ರತಿಯೊಂದು ಕ್ಷೇತ್ರದಲ್ಲೂ ಅಂಬೇಡ್ಕರ್ ಅವರ ಪಾತ್ರ ಅಪಾರವಾಗಿತ್ತು.ಈ ಕಾರಣಕ್ಕಾಗಿ ಅಂಬೇಡ್ಕರ್ ಅವರ ಓದು ಒಂದು ಹೊಸ ಜಗತ್ತಿಗೆ ಪ್ರವೇಶಿಸಿದಂತೆ ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ಸಮುದಾಯದ ಜನರು ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.ಅಂಬೇಡ್ಕರ್ ಅವರು ಪ್ರಜೆಗಳ ಬದುಕಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರಲು ರಕ್ತಪಾತವಿಲ್ಲದೇ ನಡೆಯುವಂತಹ ಕ್ರಾಂತಿಯನ್ನು ಪ್ರಜಾಪ್ರಭುತ್ವ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಜಾನಪದ ತಜ್ಞರಾದ ಚಿಕ್ಕಮರೀಗೌಡ, ಕಾಲೇಜಿನ ಪ್ರಾಂಶುಪಾಲರಾದ ವೇಣುಗೋಪಾಲ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.