Friday, April 4, 2025
Google search engine

Homeರಾಜ್ಯಬಾಬುಸಾಬ್​ ​ಪಾಳ್ಯ ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಬಾಬುಸಾಬ್​ ​ಪಾಳ್ಯ ಕಟ್ಟಡ ಕುಸಿತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಂಗಳೂರಿನ ಬಾಬುಸಾಬ್​ ​ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿ ಧಾವಿಸಿದ್ದು, ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪ್ರಧಾನಿ ಕಾರ್ಯಾಲಯ ಸಂದೇಶ ಪ್ರಕಟಿಸಿದೆ.

ಮೃತ 8 ಜನರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದ್ದು, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮೃತ ಕಾರ್ಮಿಕರ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿ ಎಂದಿದ್ದಾರೆ. ಜತೆಗೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಮೃತರ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಡೆದಿರುವ ಭೀಕರ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಂಜೆಯಿಂದಲೂ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇದುವರೆಗೆ 8 ಕಾರ್ಮಿಕರ ಮೃತದೇಹಗಳನ್ನ ಹೊರಗೆ ತೆಗೆಯಲಾಗಿದೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಎನ್​ಡಿಆರ್​​ಎಫ್, ಎಸ್​ಡಿಆರ್​​ಎಫ್ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 14 ಜನರನ್ನು ರಕ್ಷಿಸಿದ್ದಾರೆ.

ಕಟ್ಟಡದ ಅವಶೇಷಗಳಡಿಯಿಂದ ಬಿಹಾರ ಮೂಲದ ಅರ್ಮಾನ್, ಮೊಹಮ್ಮದ್ ಸಾಹೀಲ್, ಶ್ರೀರಾನ್ ಕಿರುಪಾಲ್, ಸೋಲೋ ಪಾಸ್ವಾನ್, ತಮಿಳುನಾಡು ಮೂಲದ ಮಣಿಕಂಠನ್, ಸತ್ಯಾರಾಜು, ಆಂಧ್ರದ ತುಳುಸಿರೆಡ್ಡಿ, ಉತ್ತರ ಪ್ರದೇಶದ ಪುಲ್ಚನ್ ಯಾದವ್ ಎಂಬುವರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಅವಶೇಷಗಳಡಿ ಸಿಲುಕಿರುವ ಏಳುಮಲೈ, ಗಜೇಂದ್ರ ಪತ್ತೆಗೆ ಶೋಧ ನಡೆಯುತ್ತಿದೆ.

ಬಾಬುಸಾಬ್ ಪಾಳ್ಯದಲ್ಲಿ ಕುಸಿದು ಬಿದ್ದಿರುವ ಈ ಕಟ್ಟಡ ಕೇವಲ 40*60 ಅಳತೆಯಲ್ಲಿ ನಿರ್ಮಾಣವಾಗುತ್ತಿತ್ತು. ಮಾಲೀಕ ಯಾವೆಲ್ಲ ನಿಯಮಗಳನ್ನ ಉಲ್ಲಂಘನೆ ಮಾಡಬೇಕೋ ಅಷ್ಟೂ ನಿಯಮಗಳನ್ನು ಉಲ್ಲಂಘಿಸಿದ್ದ. 3 ಅಂತಸ್ತಿನ ಕಟ್ಟಡ ಕಟ್ಟುವಾಗಲೇ ಬಿಬಿಎಂಪಿ ದಾಖಲೆ ಕೇಳಿತ್ತು. ಏಪ್ರಿಲ್ ​ನಲ್ಲಿ 1, ಸೆಪ್ಟೆಂಬರ್ ​ನಲ್ಲಿ 2 ನೋಟಿಸ್ ನೀಡಲಾಗಿತ್ತು. ಆದರೆ ಯಾವುದೇ ನೋಟಿಸ್ ​ಗೂ ಮಾಲೀಕ ಉತ್ತರವನ್ನೇ ನೀಡಿರಲಿಲ್ಲ. ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ನೋಟಿಸ್ ನೀಡಿ‌ ಕೈತೊಳೆದುಕೊಂಡಿದ್ದರು.

ಸದ್ಯ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಹೊರಮಾವು ಉಪವಿಭಾಗದ ಎಇಇ ವಿನಯ್​ನ ಅಮಾನತು ಮಾಡಲಾಗಿದೆ.

ಹೆಣ್ಣೂರು ಠಾಣೆ ಪೊಲೀಸರು ಕಟ್ಟಡದ ಮಾಲೀಕ ಭುವನ್, ಮುನಿರೆಡ್ಡಿ, ಗುತ್ತಿಗೆದಾರ ಮುನಿಯಪ್ಪನನ್ನು ಬಂಧಿಸಿದ್ದಾರೆ. ಇನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿಬಿಎಂಪಿ ವಲಯ ಆಯುಕ್ತ ರಮೇಶ್‌, ಎಇ ರಮೇಶ್‌ರನ್ನ ತರಾಟೆಗೆ ತೆಗೆದುಕೊಂಡು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular