ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ಮೈಸೂರು-ಊಟಿ ಹೆದ್ದಾರಿಯಲ್ಲಿ ಮರಿ ಆನೆ ಸಾವಿಗೀಡಾಗಿದ್ದು ತಾಯಿ ಆನೆ ರಸ್ತೆಯಲ್ಲಿ ಬಂದು ಕಣ್ಣೀರು ಹಾಕುತ್ತಿದ್ದ ಘಟನೆ ನಡೆದಿದೆ. ಈ ವೇಳೆ ತಾಯಿ ಆನೆ ವಾಹನ ಸವಾರರ ಮೇಲೆ ದಾಳಿ ನಡೆಸಬಹುದೆಂದು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಹ ಆಗಿತ್ತು.
ಅರಣ್ಯ ಅಧಿಕಾರಿಗಳ ಪ್ರಕಾರ ಕೆಲವು ದಿನಗಳ ಹಿಂದೆ ಹುಲಿ ದಾಳಿಗೆ ಒಳಗಾಗಿದ್ದ ಆನೆಮರಿಯ ಎರಡು ಕಾಲುಗಳು ಮತ್ತಿತರ ಕಡೆ ಗಾಯಗಳಾಗಿ ಅವು ಕೊಳೆತು ಹುಳ ಬಿದ್ದಿದ್ದವು. ಈ ಕಾರಣ ಆನೆ ಮರಿ ನಿತ್ರಾಣಗೊಂಡಿತ್ತು. ಇದೇ ಸಂದರ್ಭದಲ್ಲಿ ಅವು ಆಕಸ್ಮಿಕವಾಗಿ ರಸ್ತೆ ದಾಟುತ್ತಿದ್ದ ವೇಳೆ ಸಾವಿಗೀಡಾಯಿತು. ತನ್ನ ಮರಿ ಕಳೆದುಕೊಂಡ ಕೋಪದಲ್ಲಿ ತಾಯಿ ಆನೆ ವಾಹನ ಸವಾರರ ಮೇಲೆ ದಾಳಿ ನಡೆಸಬಹುದೆಂಬ ಕಾರಣದಿಂದ ಸುಮಾರು ಒಂದು ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು.
ತಾಯಿ ಆನೆ ಕಣ್ಣೀರು: ತನ್ನ ಮರಿ ಕಳೆದುಕೊಂಡ ತಾಯಿ ಆನೆ ರಸ್ತೆಯಲ್ಲಿ ಕಣ್ಣೀರು ಹಾಕಿ ಸೊಂಡಿಲು ಕಾಲಿನಿಂದ ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ಘಟನೆ ಕರುಳು ಕಿವುಚಿದಂತಿತ್ತು.