ಎಚ್.ಡಿ.ಕೋಟೆ:ಎಚ್.ಡಿ.ಕೋಟೆ ಪಟ್ಟಣದ ತಾಲ್ಲೂಕು ಆಡಳಿತ ಕೇಂದ್ರದಲ್ಲಿ ತಹಶೀಲ್ದಾರ್ ಸಣ್ಣರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ರೈತ ಸಂಪರ್ಕ ಕುಂದು ಕೊರತೆ ಸಭೆ ನಡೆಯಿತು. ಕೆರೆ ಒತ್ತುವರಿ ತೆರವು ವಿಚಾರವಾಗಿ ರೈತ ಮುಖಂಡರು, ಅಧಿಕಾರಿಗಳ ನಡುವೆ ಪರಸ್ಪರ ವಾಗ್ದಾಳಿ ನಡೆಯಿತು. ಏನ್ರಿ ರೈತರು ಅಂದ್ರೆ ನಿಮಗೆ ಅಷ್ಟೋಂದು ಅಸಡ್ಡೆನಾ, ಇಲ್ಲಿ ಕಾಫಿ ತಿಂಡಿ ತಿಂದು ಹೋಗಲು ಬ ರ‍್ತೀವಾ, ಬಾಯಿ ಮಾತಲ್ಲಿ ಎಲ್ಲವನ್ನು ಹೇಳುವುದಾದ್ರೆ ಅನುಪಾಲನಾ ವರದಿ ಯಾಕೆ ಓದಬೇಕು, ಎಲ್ಲಿ ಅನುಪಾಲನಾ ವರದಿ, ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಎಷ್ಟು ಕಾರ್ಯರೂಪಕ್ಕೆ ತಂದಿದ್ದೀರಾ ಏನ್ ಕಾಟಚಾರಕ್ಕೆ ಸಭೆ ಮಾಡ್ತೀರಾ ಎಂದು ತಹಶೀಲ್ದಾರ್ ಸಣ್ಣರಾಮಪ್ಪ ಅವರಿಗೆ ರೈತರು, ಮುಖಂಡರು ಮುಗಿಬಿದ್ದ ಘಟನೆ ಇಂದು ನಡೆದ ರೈತ ಸಂಪರ್ಕ ಸಭೆಯಲ್ಲಿ ಸಾಕ್ಷಿಯಾಯ್ತು.
ಪಟ್ಟಣದ ಆಡಳಿತ ಸೌಧದಲ್ಲಿರುವ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಹಶೀಲ್ದಾರ್ ಸಣ್ಣರಾಮಪ್ಪ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ರೈತರ ಮುಖಂಡರೊoದಿಗೆ ರೈತ ಸಂಪರ್ಕ ಕುಂದು ಕೊರತೆ ಸಭೆ ನಡೆಯಿತು.
ಮೊದಲ ರೈತ ಮುಖಂಡರು ಮಾತನಾಡಿ ತಾಲ್ಲೂಕಿನಲ್ಲಿ ಎಷ್ಟು ಕೆರೆಗಳಿವೆ ಎಷ್ಟು ಒತ್ತುವರಿಯಾಗಿವೆ, ಎಷ್ಟು ಕೆರೆಗಳ ಒತ್ತುವರಿ ತೆರವು ಮಾಡಿ ರಕ್ಷಣೆ ಮಾಡಿದ್ದೀರಿ ಎಂದು ತಹಸೀಲ್ದಾರ್ ಸಣ್ಣರಾಮಪ್ಪ ಅವರನ್ನು ಪ್ರಶ್ನಿಸಿದರು.

ರೈತರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡದ ದಂಢಾಧಿಕಾರಿಗಳು ನಮ್ಮಲ್ಲಿ ೨೧೧ ಕೆರೆಗಳಿವೆ ಅದರಲ್ಲಿ ೮೮ ಕೆರೆ ಒತ್ತುವರಿಯಾಗಿವೆ ಎಂದು ಗುರುತಿಸಿ, ಈಗಾಗಲೇ ೭೭ ಕೆರೆ ಒತ್ತುವರಿ ತೆರವು ಕಾರ್ಯ ಮುಗಿದಿದೆ ಎನ್ನುತ್ತಿದ್ದಂತೆ ಕುಪಿತಗೊಂಡ ರೈತ ಮುಖಂಡರು ಎಲ್ರೀ ತೆರವು ಮಾಡಿದ್ದೀರಿ, ನಾವೇ ನಾಲ್ಕು ನಾಲ್ಕು ಬಾರಿ ದೂರು ನೀಡಿದ್ದರೂ ನಮ್ಮ ದೂರಿಗೆ ಸ್ಪಂದನೆನೂ ಇಲ್ಲ, ಕೆರೆ ಒತ್ತುವರಿ ತೆರವು ಕಾರ್ಯವೂ ಇಲ್ಲ, ಯಾವ ಯಾವ ಕೆರೆ ತೆರವು ಮಾಡಿದ್ದೀರಾ ಸಭೆ ತಿಳಿಸಿ ಎಂದು ಪಟ್ಟು ಹಿಡಿದರು.
ಮಾಹಿತಿ ಇಲ್ಲದೇ ಸಭೆ ಯಾಕ್ ಮಾಡ್ತೀರಾ. ಇಲ್ಲೇನ್ ಕಾಫಿ, ಬಿಸ್ಕೇಟ್‌ಗೆ ಬಂದಿದ್ದೀವಾ,
ರೈತ ಮುಖಂಡರ ಮರು ಪ್ರಶ್ನೆಯಿಂದ ವಿಚಲಿತರಾದ ತಹಶೀಲ್ದಾರ್ ಸಭೆ ಮಾಹಿತಿ ತಂದಿಲ್ಲ ಎಂದರು, ಇವರ ಮಾತಿನಿಂದ ಕುಪಿತರಾದ ಮುಖಂಡರು ಮತ್ತೆ ಇಲ್ಲಿ ರೈತರು ಸಭೆಗೆ ಕಾಫಿ, ಬಿಸ್ಕೇಟ್ ಕೊಡ್ತೀರಾ ಎಂದು ಬಂದಿದ್ದೇವಾ ಎಂದು ಆಕ್ರೋಶ ಹೊರ ಹಾಕಿದರು.
ಈ ಸಂದರ್ಭ ಸಭೆಯಲ್ಲಿದ್ದ ಪತ್ರಕರ್ತರೋರ್ವರು ಆಗಲೀ ಸರ್, ನಿಮ್ಮ ಲೆಕ್ಕದಲ್ಲೇ ತೆರವಾಗದೆ ಇರುವ ಆ ಹತ್ತು ಕೆರೆಗಳು ಯಾವ್ದು ಹೇಳಿ ಅಂದ್ರೂ ಆಗ ತಹಶೀಲ್ದಾರ್ ಮೋಬೈಲ್ ತೆಗೆದುಕೊಂಡು ಹುಡುಕಾಟ ಆರಂಭಿಸಿದರು. ಇವರ ನಡೆಯಿಂದ ಮತ್ತಷ್ಟು ಕುಪಿತರಾದ ರೈತ ಸಂಘದ ಅಧ್ಯಕ್ಷ ಮಹದೇವನಾಯ್ಕ, ಪ್ರಸಾದ್, ಮಾಜಿ ಅಧ್ಯಕ್ಷ ಜಕ್ಕಳ್ಳಿ ರವಿಕುಮಾರ್, ದಸಂಸ ಮುಖಂಡರಾದ ಸಣ್ಣಕುಮಾರ್, ಮಲಾರ ಮಹದೇವಸ್ವಾಮಿ ಇನ್ನೀತರ ಮುಖಂಡರು ಮಾಹಿತಿ ಇಲ್ಲ ಅಂದ್ರೆ ಸಭೆ ಯಾಕ್ರೀ ಕರಿತೀರಾ ಎಂದು ರೇಗಾಡಿದ ಮುಖಂಡರು ತಹಶೀಲ್ದಾರ್ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ರೈತ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿದರು.
ಕೊನೆಗೆ ಮೋಬೈಲ್‌ನಲ್ಲಿ ಹುಡುಕಾಟ ನಡೆಸಿದ ತಹಶೀಲಾರ್ ಸಣ್ಣರಾಮಪ್ಪ ಅವರು ಕೊನೆಗೆ ನಾಲ್ಕೆದು ಕೆರೆಗಳ ಹೆಸರು ಹೇಳಿ ನಿಟ್ಟಿಸುರು ಬಿಟ್ಟರು. ಈ ವೇಳೆ ರೈತ ಸಂಘದ ಅಧ್ಯಕ್ಷ ಮಹದೇವನಾಯ್ಕ ಅವರು ಕೆರೆ ತೆರವಿಗೆ ನೀವೂ ಯಾಕೆ ಹಿಂದೇಟು ಹಾಕುತ್ತಿದ್ದೀರಿ, ಕೆರೆ ಅತಿಕ್ರಮ ಮಾಡಿದರೇ ಕಾಯಿದೆಗಳನ್ನಿ ಬಳಸಿಕೊಂಡು ಅಂತವರ ಮೇಲೆ ಕ್ರೀಮಿನಲ್ ಕೇಸ್ ಹಾಕಿ, ನೋಡಿ ಸರ್ ಮುಂದಿನ ಸಭೆಗೂ ಮುನ್ನ ಕಳೆದ ಸಭೆಯಲ್ಲಿ ಕೈಗೊಂಡಿರುವ ಎಲ್ಲ ನಿರ್ಣಯಗಳು ಕಾರ್ಯಗತ ಆಗಬೇಕು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಇರಬೇಕು ಎಂದು ತಾಕೀತು ಮಾಡಿದರು.
ಒಟ್ಟಾರೆ, ಇಂದಿನ ರೈತ ಸಂಪರ್ಕ ಕುಂದು ಕೊರತೆ ಸಭೆ ರೈತರು ಎದುರಿಸುತ್ತಿರುವ ಇನ್ನೀತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದೆ ಕೆರೆ ಒತ್ತುವರಿ ತೆರವು ವಿಚಾರದಲ್ಲೇ ಮುಕ್ತಾಯವಾಯ್ತು.
ಸಭೆಯಲ್ಲಿ ತಾಲೂಕು ರೈತ ಸಂಘದ ಉಪಾಧ್ಯಕ್ಷ ಚಿಕ್ಕಣ್ಣೇಗೌಡ, ಗೋವಿಂದಗೌಡ, ಯೂತ್ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಟೌನ್ ಅಧ್ಯಕ್ಷ ಪ್ರಸಾದ್, ಗೌರವಧ್ಯಕ್ಷ ಜಕ್ಕಳ್ಳಿ ರವಿಕುಮಾರ್, ಖಜಾಂಚಿ ಶಿವಲಿಂಗಪ್ಪ, ಕಾರ್ಯಾಧ್ಯಕ್ಷ ಪುಟ್ಟಣಯ್ಯ, ಹಿರೇಹಳ್ಳಿ ಚಂದ್ರಪ್ಪ, ಕುಣಿಗಲ್ ರಾಜು, ಮಹಿಳಾ ಅಧ್ಯಕ್ಷೆ ದೇವಮ್ಮ, ಮುಖಂಡರಾದ ಮೀಲ್ ನಾಗರಾಜು, ಸಣ್ಣಕುಮಾರ್, ವಕೀಲ ಚೌಡಳ್ಳಿ ಜವರಯ್ಯ, ರಾಚಯ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ತಾಲ್ಲೂಕು ಪಂಚಾಯತ್ ರಂಗಸ್ವಾಮಿ ಸೇರಿದಂತೆ ೬೦ಕ್ಕೂ ಹೆಚ್ಚು ರೈತ ಮುಖಂಡರು ಇದ್ದರು.