ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಇರಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತೂರು ಗ್ರಾಮದಲ್ಲಿಂದು ಬಹಿಷ್ಕಾರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು
ಕರ್ನಾಟಕ ಮಾನವ ಹಕ್ಕುಗಳ ಆಯೋಗ ಫೆಬ್ರವರಿ ೧ ರಂದು ರಂದು ಚಾಮರಾಜನಗರದಲ್ಲಿ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಲೇವಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಂವಾದ ಸಭೆಯಲ್ಲಿ ಗ್ರಾಮಸ್ಥರಾದ ಎಸ್.ಪಿ. ರಾಮುರವರು ಕಳೆದ ೧೨ ವರ್ಷಗಳಿಂದ ತಮ್ಮ ಕೊಟ್ಟಿಗೆಯನ್ನು ವಶಪಡಿಸಿಕೊಂಡು ತಮ್ಮ ಮೇಲೆ ಊರಿನಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಯೋಗವು ಈ ಬಗ್ಗೆ ಪರಿಶೀಲಿಸಲು ಸೂಚಿಸಿತ್ತು. ಈ ಕಾರಣದಿಂದ ಜಿಲ್ಲಾಡಳಿತವು ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಸುತ್ತೂರು ಗ್ರಾಮದಲ್ಲಿ ಇಂದು ಶಾಂತಿ ಸಭೆ ಆಯೋಜಿಸಲಾಗಿತ್ತು.
ಶಾಂತಿ ಸಭೆಯಲ್ಲಿ ದೂರುದಾರರಾದ ಎಸ್.ಪಿ. ರಾಮು ಮತ್ತು ಅವರ ಮಗನಾದ ವೆಂಕಟೇಶ್‌ರವರಿಗೆ ದೂರಿನ ಬಗ್ಗೆ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಗ್ರಾಮದ ಎಲ್ಲಾ ಕೋಮಿನ ಮುಖಂಡರು, ಹಿರಿಯರಿಂದ ಸತ್ಯಾ ಸತ್ಯತೆಯನ್ನು ಪರಿಶೀಲಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸುಮಾರು ೨ ಗಂಟೆಗಳ ಕಾಲ ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದರು. ಸಾಮಾಜಿಕ ಬಹಿಷ್ಕಾರ ಸಂವಿಧಾನತ್ಮಾಕವಾಗಿ ನಿಷೇಧವಾಗಿದ್ದು, ಅಂತಹ ಆಚರಣೆಗಳು ಜಿಲ್ಲೆಯಲ್ಲಿ ಎಲ್ಲೂ ಕೂಡ ನಡೆಯಬಾರದು. ಯಾರಿಗಾದರೂ ವೈಯಕ್ತಿಕ ದ್ವೇಷಗಳ ಹಿನ್ನೆಲೆಯಲ್ಲಿ ವೈಮನಸ್ಸು ಉಂಟಾಗಿದ್ದರೆ ಅವುಗಳನ್ನು ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾಮ ಠಾಣೆಗಳು, ರಸ್ತೆ, ನಿವೇಶನಗಳು, ವಸತಿ ಸಂಬಂಧಿತ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಯಾವುದೋ ನಿರ್ದಿಷ್ಟ ಕಾರಣಕ್ಕೆ ಯಾವುದೇ ವ್ಯಕ್ತಿಗೆ ಕುಟುಂಬಗಳಿಗೆ ಸಾಮಾಜಿಕ ಭಾವನೆಗಳಿಗೆ ಧಕ್ಕೆ ತರುವಂತೆ ಚಟುವಟಿಕೆಗಳನ್ನು ನಡೆಸಕೂಡದು. ಸಾಮಾಜಿಕ ಬಹಿಷ್ಕಾರದಂತಹ ದೂರುಗಳು ಯಾವುದೇ ಕಾರಣಕ್ಕೂ ಬರಬಾರದು ಎಂದರು.
ಗ್ರಾಮದಲ್ಲಿ ಹಿರಿಯರು, ಮಹಿಳೆಯರು, ಯುವಕರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ, ಸಂವಿಧಾನಾತ್ಮಕವಾಗಿ ನೀಡಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಪ್ರಯತ್ನಿಸಬೇಕು. ಯಾವುದೇ ಕುಟುಂಬಗಳಿಗೆ ಬಹಿಷ್ಕಾರದಂತಹ ಸಾಮಾಜಿಕ ಭಾವನೆಗಳಿಗೆ ಧಕ್ಕೆ ತರುವಂತಹ ಚಟುವಟಿಕೆಗಳು ನಡೆದಲ್ಲಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಉದೇಶ ಅವರು ಮಾತನಾಡಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಯಾವುದೇ ವ್ಯಕ್ತಿಗಳ ಕುಟುಂಬದವರ ವಿರುದ್ಧ ಬಹಿಷ್ಕಾರದಂತಹ ಆಚರಣೆಯನ್ನು ನಡೆಸಬಾರದು. ಮತ್ತೆ ಇಂತಹ ದೂರುಗಳು ಬಂದಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಬಸವರಾಜು, ಕೊಳ್ಳೇಗಾಲ ಡಿವೈಎಸ್‌ಪಿ ಎಂ.ಧಮೇಂದ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್ ಸಭೆಯಲ್ಲಿ ಇದ್ದರು.