ಬಸ್ ನಿಲ್ದಾಣಗಳಲ್ಲಿ ಒಟ್ಟು 11 ಬ್ಯಾಗ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಅಂತರ್ ಜಿಲ್ಲೆ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ದಿನಾಂಕ: 23-01-2026 ರಂದು ಸಂಜೆ ಸಮಯ ಸುಮಾರು 7-00 ಗಂಟೆಗೆ ಪ್ರಾಯಸ್ಥ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ ರೂ.20,000 ನಗದು ಹಣ ಇರುವ ಟ್ರಾಯಲಿ ಬ್ಯಾಗ್ ನ್ನು ಇಟ್ಟು ಕುಳಿತುಕೊಂಡಿದ್ದ ಸಮಯ ಯಾರೋ ಕಳ್ಳರು ಚಿನ್ನಾಭರಣಗಳಿರುವ ಬ್ಯಾಗ್ ನ್ನು ಕಳವು ಮಾಡಿಕೊಂಡ ಹೋದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ:10/2026 ಕಲಂ: 303(2), BNS-2023 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ಪ್ರಕರಣದ ಪತ್ತೆಯ ಕುರಿತು ವಿಶೇಷ ತಂಡವನ್ನು ರಚಿಸಿದ್ದು, ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್, ಪಿ.ಎಸ್.ಐ ಮತ್ತು ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ, ಸಿದ್ದು, ಹರೀಶ್, ನಿತಿಶ್, ಗಾಲಿಬ್ ರವರೊಂದಿಗೆ ಕಳವು ಪ್ರಕರಣಗಳಲ್ಲಿ ಭಾಗಿಯಾದ ಅಂತರ್ ಜಿಲ್ಲೆ ಕಳ್ಳನಾದ ಮಡಿಕೇರಿ ಮೂಲದ ಮಹಮ್ಮದ್ ಇಮ್ರಾನ್ ಎನ್.ಎಮ್ ಎಂಬಾತನನ್ನು ದಿನಾಂಕ:28-01-2026 ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ನ ಬಳಿಯಲ್ಲಿ ದಸ್ತಗಿರಿ ಮಾಡಿ ಆರೋಪಿತನಿಂದ ಒಟ್ಟು ರೂ 6,47,920/- ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ರೂ.5000/- ನಗದು ಹಣವನ್ನು ಸ್ವಾಧೀನಪಡಿಸಲಾಗಿದೆ. ದಸ್ತಗಿರಿ ಮಾಡಿದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ದಿನಾಂಕ:29-01-2026 ರಂದು ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯು ಬಸ್ಸು ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್ ಗಳನ್ನು ಕಳ್ಳತನ ಮಾಡುವ ರೂಢಿಗತ ಆರೋಪಿಯಾಗಿದ್ದು ಹಾಗೂ ಈತನ ಮೇಲೆ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿತನ ಮೇಲೆ ದುದ್ದ ಪೊಲೀಸ್ ಠಾಣೆಯಲ್ಲಿ-1, ಕೊಮನೂರು ಪೊಲೀಸ್ ಠಾಣೆಯಲ್ಲಿ-1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ-1, ಹಾಸನ ನಗರ ಪೊಲೀಸ್ ಠಾಣೆಯಲ್ಲಿ-1, ಚೆನ್ನರಾಯಪಟ್ಟಣ ನಗರ ಠಾಣೆಯಲ್ಲಿ-1, ಮೈಸೂರು ದೇವರಾಜ ನಗರ ಪೊಲೀಸ್ ಠಾಣೆಯಲ್ಲಿ-1 ಬ್ಯಾಗ್ ಕಳ್ಳತನ ಪ್ರಕರಣಗಳು ದಾಖಲಗಿದ್ದು, ಹಾಸನ ಜಿಲ್ಲೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ-1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ -2, ಹಾಸನ ಜಿಲ್ಲೆ ದುದ್ದ ಪೊಲೀಸ್ ಠಾಣೆಯಲ್ಲಿ-1 ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.
ಅಲ್ಲದೇ ಆರೋಪಿತನು ಹಾಸನ ಜಿಲ್ಲೆಯ ಮನೆಕಳವು ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡುನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಮಾನ್ಯ ನ್ಯಾಯಾಲಯವು ಆರೋಪಿತನ ವಿರುದ್ದ ವಾರೆಂಟ್ ನ್ನು ಕೂಡಾ ಹೊರಡಿಸಿದ್ದರು.
- ಶಂಶೀರ್ ಬುಡೋಳಿ



