ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಗೆಲುವು ಸಾಧಿಸಿದ್ದಾರೆ.
ಗದ್ದಿಗೌಡರ್ ಅವರು 54221 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರ್ ಅವರಿಗೆ ಒಟ್ಟಾರೆ 5,12,289 ಮತಗಳು ಲಭಿಸಿದ್ದು, ಸಂಯುಕ್ತಾ ಅವರಿಗೆ 4,58,068 ಮತಗಳು ಲಭಿಸಿವೆ.
ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳೇ ಸ್ಪರ್ಧಿಸಿರುವುದು ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಐದನೇ ಬಾರಿ ಆಯ್ಕೆ ಬಯಸಿ ಬಿಜೆಪಿಯಿಂದ ಪಿಸಿ ಗದ್ದಿಗೌಡರ್ ಅವರು ಸ್ಪರ್ಧಿಸಿದ್ದರು. ಮೊದಲ ಬಾರಿ ಸಂಯುಕ್ತಾ ಪಾಟೀಲ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿಯೂ ಆಗಿರುವ ಸಂಯುಕ್ತಾ ಪಾಟೀಲ್ ಪಿಸಿ ಗದ್ದಿಗೌಡರ್ ಅವರಿಗೆ ತುರುಸಿನ ಪೈಪೋಟಿ ನೀಡಿದ್ದರು. ಆದರೆ, ಕೊನೆಗೂ ಗದ್ದಿಗೌಡರ್ ಅವರು 54221 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.