ಚಿಕ್ಕಬಳ್ಳಾಪುರ: ಚಾಲಕನ ನಿಂಯತ್ರಣ ತಪ್ಪಿ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಸಾದಲಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ನೆರೆಯ ರಾಜ್ಯ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ಕೊಟ್ಟು ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ನೆರೆಯ ಆಂಧ್ರಪ್ರದೇಶದ ಮೂಲದವರು ಎಂದು ತಿಳಿದು ಬಂದಿದ್ದು, ಯಾವುದೇ ದಾಖಲಾತಿಗಳು ಇಲ್ಲದೆ ಕಾರಿನ ಒಳಗಡೆ ಸುಮಾರು ೧೫ಕ್ಕೂ ಹೆಚ್ಚು ರಕ್ತ ಚಂದನದ ತುಂಡುಗಳನ್ನು ಸಾಗಣೆ ಮಾಡಿ ಅಧಿಕ ಹಣಕ್ಕೆ ಮಾರುವ ಉದ್ದೇಶದಿಂದ ಸಿನಿಮಾ ಸ್ಟೈಲ್‌ನಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಸಾಗಿಸುತ್ತಿದ್ದರು. ಆದರೆ ಕಾರಿನಲ್ಲಿ ಬರುವಾಗ ಯಾರಿಗೂ ಅನುಮಾನ ಬಾರದಂತೆ ಅತಿಯಾದ ವೇಗದಿಂದ ಚಲಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆರೋಪಿಗಳು ಅಕ್ರಮ ದಂಧೆ ನಡೆಸಲು ಮುಂದಾಗಿದ್ದರು. ಆದ್ರೆ ಅಪಘಾತದಿಂದ ಇವರ ಕೃತ್ಯ ಬಯಲಿಗೆ ಬಂದಿದೆ.
ಬೆಂಗಳೂರು ಮೂಲದ ರವಿ(೪೭), ಚಾಮರಾಜನಗರದ ಸರಗೂರು ಮೋಳೆಯ ಎಸ್ ಎಂ ಗೋವಿಂದರಾಜು(೪೩), ಆನಂದ್(೪೦), ಸಿ ಎಸ್ ಆಸ್ಕರ್ ಪಾಷ(೬೩), ಮಹೇಂದ್ರ(೩೨) ಬಂಧಿತ ಆರೋಪಿಗಳಾಗಿದ್ದರು.