ಚಿತ್ರದುರ್ಗ : ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯ ಪರಿಶೀಲನೆ ಇಂದು ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ.
ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಶರಣರ ಪರ ವಕೀಲರಾದ ಸಂದೀಪ್ ಪಾಟೀಲ್ ಶುಕ್ರವಾರ ವಿಚಾರಣಾ ನ್ಯಾಯಾಲಯ ಆಗಿರುವ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಪ್ರತಿ ಹಾಗೂ ಶರಣರ ಪಾಸ್ ಪೋರ್ಟ್ ಸಲ್ಲಿಸಿದ್ದಾರೆ. ಇದೇ ವೇಳೆ ಹೈಕೋರ್ಟ್ ಆದೇಶದಂತೆ ಕೆ.ಸಿ.ನಾಗರಾಜ್ ಹಾಗು ಮಧುಕುಮಾರ್ ಎಂಬ ಇಬ್ಬರ ಶ್ಯೂರಿಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಈ ಶ್ಯೂರಿಟಿ ಪರಿಶೀಲನೆ ನಿಟ್ಟಿನಲ್ಲಿ ಬಿಡುಗಡೆ ಆದೇಶವನ್ನು ಇಂದು ನ. ೧೫ ಬುಧವಾರಕ್ಕೆ ಕಾಯ್ದಿರಿಸಿದ್ದರು. ಆದರೆ, ಶ್ರೀಗಳ ವಿರುದ್ಧ ಎರಡು ಪೋಕ್ಸೊ ಪ್ರಕರಣ ದಾಖಲಾಗಿದ್ದವು. ಮೊದಲ ಪ್ರಕರಣದಲ್ಲಿ ಬಂಧನದಲ್ಲಿದ್ದ ಕಾರಣ, ಎರಡನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಪಡೆದು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈಗ ಮೊದಲನೆ ಪ್ರಕರಣದಲ್ಲಿ ಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರ ಬಿಡುಗಡೆ ಪ್ರಕ್ರಿಯೆ ಶುರುವಾಗುತ್ತಲೇ, ಸರ್ಕಾರಿ ವಕೀಲರು ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ್ದಾರೆ. ಇದರಿಂದ ಬಿಡುಗಡೆಯ ಬಗ್ಗೆ ತುಸು ಆತಂಕ ಮೂಡಿದೆ.
ಮುರುಘಾ ಶ್ರೀಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೈಕೋರ್ಟ್ ವಕೀಲ ಸಂದೀಪ್ ಪಾಟೀಲ್ ಎರಡನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಮಾಡುವುದು ಹೈಕೋರ್ಟ್ ಆದೇಶದ ಪ್ರಕಾರ ನ್ಯಾಯಾಂಗ ನಿಂಧನೆಯಾಗುತ್ತದೆ. ಆ ಪ್ರಕರಣಕ್ಕೆ ತಡೆಯಾಜ್ಞೆ ಇರುವುದರಿಂದ ಹಾಗೇ ಮಾಡಲು ಬರುವುದಿಲ್ಲ. ಜಾಮೀನು ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುವ ಬೆಳಬಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ. ಬರೋಬ್ಬರಿ ೧೪ ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಶ್ರೀಗಳಿಗೆ ಬಿಡುಗಡೆಯ ಭಾಗ್ಯ ದೊರೆಯುತ್ತದಾ ಎನ್ನುವ ಪ್ರಶ್ನೆ ಎದುರಾಗಿದೆ.