ನವದೆಹಲಿ: ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದ್ದು, ಇಮ್ರಾನ್ ಖಾನ್ ಇಂದು ಜೈಲಿನಿಂದ ಹೊರಬರಲಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಇಮ್ರಾನ್ ಜೊತೆಗೆ ಅವರ ಪತ್ನಿ ಬುಶ್ರಾ ಬೀಬಿಗೂ ಜಾಮೀನು ಮಂಜೂರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಅಮಾನತುಗೊಳಿಸಿದೆ.
ಈ ಪ್ರಕರಣದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್‌ರನ್ನು ಆಗಸ್ಟ್ ೫ ರಂದು ಕೆಳ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಇದರೊಂದಿಗೆ ಇಮ್ರಾನ್ ಖಾನ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಂದಿನಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ಜೈಲಿನಲ್ಲಿದ್ದಾರೆ. ಈ ತೀರ್ಪನ್ನು ಅವರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದೀಗ ನ್ಯಾಯಾಲಯ ಇಮ್ರಾನ್ ಖಾನ್‌ಗೆ ರಿಲೀಫ್ ನೀಡಿದೆ.
ಮಾಜಿ ಪ್ರಧಾನಿಯ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಮರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ, ಈ ನಿರ್ಧಾರವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ಆಗಸ್ಟ್ ೨೫ ರಂದು ಮೌಖಿಕ ಪ್ರತಿಕ್ರಿಯೆಯನ್ನು ಮಾಡುವಾಗ, ವಿಚಾರಣಾ ನ್ಯಾಯಾಲಯ ಮಾಡಿರುವುದು ತಪ್ಪು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.
ಇಮ್ರಾನ್ ಖಾನ್ ಅವರು ೨೦೧೮-೨೦೨೨ರ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಅವರು ಮತ್ತು ಅವರ ಕುಟುಂಬ ಪಡೆದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಜೊತೆಗೆ ಐದು ವರ್ಷಗಳ ಕಾಲ ರಾಜಕೀಯದಿಂದ ಅವರನ್ನು ನಿಷೇಧಿಸಲಾಗಿದೆ, ಮುಂಬರುವ ಚುನಾವಣೆಯಲ್ಲಿಯೂ ಸ್ಪರ್ಧಿಸದಂತೆ ಅವರನ್ನು ನಿರ್ಬಂಧಿಸಲಾಗಿದೆ.