ಬೆಂಗಳೂರು : ರಾಜ್ಯದ ಚಾರಣಪಥ, ಅರಣ್ಯಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್ ನಿಷೇಧಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಆದೇಶಿಸಿದ್ದಾರೆ.
ವಿಕಾಸಸೌಧದಲ್ಲಿಂದು ಆನ್ ಲೈನ್ ನಲ್ಲಿ ಚಾರಣ ಪಥಗಳ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸುವ https://aranyavihaara.karnataka.gov.in ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಚಾರಣಪಥ ಮತ್ತು ಅರಣ್ಯದೊಳಗಿನ ರಸ್ತೆಯಲ್ಲಿ ಸಂಚರಿಸುವಾಗ ಪ್ಲಾಸ್ಟಿಕ್ ನೀರಿನ ಬಾಟಲಿ, ಕ್ಯಾರಿಬ್ಯಾಗ್, ತಿಂಡಿ ಪೊಟ್ಟಣ ಇತ್ಯಾದಿ ನಿಷೇಧಿಸಲಾಗುವುದು ಎಂದರು.
ಕಾಡಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತು ಚಾರಣಕ್ಕೆ ಬರುವವರಿಗೆ ಮೊದಲ ಹಂತದಲ್ಲಿ ನಿಷೇಧಿತ ವಸ್ತುವನ್ನು ಸ್ವಯಂ ಕಸದ ಬುಟ್ಟಿಗೆ ಹಾಕಲು ತಿಳಿಸಲಾಗುವುದು. ೨ನೇ ಹಂತದಲ್ಲಿ ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆ ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್, ಮದ್ಯದ ಬಾಟಲಿ, ಸಿಗರೇಟ್, ಬೆಂಕಿಪೊಟ್ಟಣ ಇತ್ಯಾದಿ ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.