ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ಮಂಡ್ಯದಲ್ಲಿ ಮತ್ತಷ್ಟು ಕಾವೇರಿ ಕಿಚ್ಚು ಕಾವೇರಿದ್ದು, ನಾಳೆ ಮಂಡ್ಯ ನಗರ ಬಂದ್ ಮಾಡಲು ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿಯಿಂದ ಕರೆ ನೀಡಲಾಗಿದೆ. ಎಲ್ಲ ಸಂಘಟನೆಗಳು ಬೆಂಬಲ ಘೋಷಿಸಿದ್ದು ನಾಳೆ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ಮಂಡ್ಯ ನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಆಟೋ ಸಂಚಾರ, ಖಾಸಗಿ ಬಸ್ ಸಂಚಾರ, ಶಾಲಾ-ಕಾಲೇಜುಗಳು ಸಹ ಬಂದ್ ಮಾಡಲಾಗುವುದು.
ಸರ್ಕಾರಿ ಕಚೇರಿ ಬಂದ್ ಮಾಡುವಂತೆ ಈಗಾಗಲೇ ಮನವಿ ಮಾಡಲಾಗಿದ್ದು, ನಾಳೆ ಮೆಡಿಕಲ್, ಆಸ್ಪತ್ರೆ, ಹಾಲಿನ ಬೂತ್ ಮಾತ್ರ ಓಪನ್ ಇರಲಿದೆ. ವಾತಾವರಣ ನೋಡಿಕೊಂಡು ಕೆಎಸ್ಆರ್ಟಿಸಿ ಬಸ್ ಓಡಾಟ ಇರಲಿದೆ. ಬೆಳಿಗ್ಗೆ 9 ಗಂಟೆಯಿಂದ ಮಂಡ್ಯ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಸಂಜಯ್ ವೃತ್ತ, ಮಹಾವೀರ ವೃತ್ತ, ವಿವಿ ರೋಡ್, ಡಬಲ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು.
ಜೊತೆಗೆ ಮಂಡ್ಯ ನಗರದಾದ್ಯಂತ ಬೃಹತ್ ಬೈಕ್ ರಾಲಿ ನಡೆಸಲು ರೈತರು ಪ್ಲಾನ್ ನಡೆಸಿದ್ದಾರೆ .ನಾಳೆ ಅಂಗಡಿ ಮುಗ್ಗಟ್ಟು ತೆರೆಯದಂತೆ ವ್ಯಾಪಾರಸ್ಥರಲ್ಲಿ , ಕಾವೇರಿ ಬಂದ್‌ಗೆ ಬೆಂಬಲಿಸುವಂತೆ ಸಾರ್ವಜನಿಕರಿಗೆ ಮೈಕ್ ಮೂಲಕ ಬಂದ್ ಗೆ ಬೆಂಬಲ ನೀಡುವಂತೆ ಜೊತೆಗೆ ನಾಳಿನ ಬಂದ್ ಯಶಸ್ವಿಯಾಗಲಿ ,ರೈತರ ಹೋರಾಟ ಯಶಸ್ವಿಯಾಗಲಿ, ತಮಿಳುನಾಡಿಗೆ ನೀರು ಬಿಡಬಾರದು ಎಂದು ಘೋಷಣೆ ಕೂಗಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಬೆಂಬಲ ಕೋರಿದರು.