ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ಹೆಣ್ಣಾನೆ ಮರಿಯೊಂದು ಮೃತಪಟ್ಟಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಕುಂದುಕೆರೆ ಶಾಖೆಯ ಕಡಬೂರು ಗಸ್ತಿನ ಕೋಟೆಗೆರೆ ಕೆರೆಹಳ್ಳದ ಪಕ್ಕದಲ್ಲಿ 3-4 ವರ್ಷದ ಹೆಣ್ಣಾನೆ ಮರಿಯು ಮೃತಪಟ್ಟಿದ್ದು, ವನ್ಯಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಹಿತಿ ಅರಿತ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ ಹಾಗು ಕುಂದುಕೆರ ವಲಯದ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬಂಡೀಪುರ ಅರಣ್ಯಾಧಿಕಾರಿ ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ ಮೃತ ಹೆಣ್ಣು ಮರಿಯಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ತದ ನಂತರ ಮೇಲಾಧಿಕಾರಿಗಳ ಅನುಮತಿ ಪಡೆದು ವನ್ಯಪ್ರಾಣಿಗಳ ಆಹಾರಕ್ಕೆ ಆನೆ ಮೃತ ದೇಹವನ್ನು ಪ್ರಕೃತಿಯಲ್ಲಿ ಬಿಡಲಾಯಿತು.