ಬೆಂಗಳೂರು: ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ತೆರಮರೆಯ ಕಸರತ್ತು ನಡೆಸುತ್ತಿದ್ದು ರಾಜ್ಯ ಸರ್ಕಾರಕ್ಕೆ ಕೇರಳಾ ಸರ್ಕಾರದಿಂದ ಒತ್ತಡ ಬರುತ್ತಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಧ್ವನಿ ಎತ್ತಿದ್ದಾರೆ.
ಈ ಕುರಿತು ಲೋಕಸಭೆ ಕಲಾಪದಲ್ಲಿ ಮಾತನಾಡಿರುವ ಸಂಸದ ಯದುವೀರ್, ಕಾಂಗ್ರೆಸ್ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧವನ್ನು ಕೈ ಬಿಡಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ
ಇದರಿಂದಾಗಿ ಉಂಟಾಗುವ ಅನಾಹುತಗಳು ಮತ್ತು ವನ್ಯಜೀವಿ ಹಾಗೂ ಮಾನವ ಸಂಘರ್ಷದ ಸಂಭವಗಳು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಯಾರೊಂದಿಗೂ ರಾಜಿಯಾಗದೆ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ತನ್ನ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.
ಜೊತೆಗೆ ರಾಜ್ಯದ ಅರಣ್ಯ ಸುರಕ್ಷತೆಯ ವಿಷಯಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಹಾಗಾಗಿ ಈ ವಿಷಯದ ಕುರಿತು ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯವು ತುರ್ತು ಕ್ರಮ ಕೈಗೊಳ್ಳಬೇಕು ಸಂಸದ ಯದುವೀರ್ ಮನವಿ ಮಾಡಿದ್ದಾರೆ.