ಸಿನಿಮಾ ಮಂದಿಗೆ ಈಗ ಸುಗ್ಗಿಯ ಕಾಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಾಣುತ್ತಿವೆ. ಬೇರೆ ಬೇರೆ ಪ್ರಕಾರದ ಸಿನಿಮಾಗಳನ್ನು ಜನರು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ರಿಲೀಸ್ ಆದ ‘ಕೌಸಲ್ಯ ಸುಪ್ರಜಾ ರಾಮಾ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಆಚಾರ್ ಆ್ಯಂಡ್ ಕೋ’, ‘ಜೈಲರ್’, ‘ಗದರ್ 2’, ‘ಒಎಂಜಿ 2’ ಮುಂತಾದ ಸಿನಿಮಾಗಳಿಗೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಆ ಪೈಕಿ ಕೆಲವು ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗಲೇ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗಲು ಸಜ್ಜಾಗಿವೆ. ನಾಳೆ ಒಂದಷ್ಟು ನಿರೀಕ್ಷಿತ ಚಿತ್ರಗಳು ಬರುತ್ತಿವೆ. ಕನ್ನಡದಲ್ಲಿ ‘ಬ್ಯಾಂಗ್’ ಮತ್ತು ‘ಕ್ಷೇತ್ರಪತಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ಈ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ‘ಬ್ಯಾಂಗ್’ :
ಹೊಸ ನಿರ್ದೇಶಕ ಗಣೇಶ್ ಪುರುಷೋತ್ತಮ್ ಅವರು ‘ಬ್ಯಾಂಗ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಅನುಭವಿ ಕಲಾವಿದೆ ಶಾನ್ವಿ ಶ್ರೀವಾಸ್ತವ ಅವರು ಈ ಚಿತ್ರದಲ್ಲಿ ಲೇಡಿ ಡಾನ್ ಪಾತ್ರ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಕೂಡ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾತ್ವಿಕಾ, ರಿತ್ವಿಕ್ ಮುರಳಿದರ್, ನಾಟ್ಯರಂಗ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ರೈತರ ಕಥೆ ಹೇಳುವ ‘ಕ್ಷೇತ್ರಪತಿ’:
ನಟ ನವೀನ್ ಶಂಕರ್ ಅವರು ‘ಗುಳ್ಟು’ ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಒಂದೇ ಬಗೆಯ ಸಿನಿಮಾಗಳಿಗೆ ಅವರು ಸೀಮಿತರಾಗಿಲ್ಲ. ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ. ಈಗ ಅವರು ಪಕ್ಕಾ ಹಳ್ಳಿ ಹೈದನಾಗಿ ರಂಜಿಸಲು ಬರುತ್ತಿದ್ದಾರೆ. ‘ಕ್ಷೇತ್ರಪತಿ’ ಸಿನಿಮಾದಲ್ಲಿ ನವೀನ್ ಶಂಕರ್ ಅವರು ರೈತ ಯುವಕನ ಪಾತ್ರ ಮಾಡಿದ್ದಾರೆ. ಅನ್ಯಾಯದ ವಿರುದ್ಧ ಸಿಡಿದೇಳುವ ಹುಡುಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಶ್ರೀಕಾಂತ್ ಕಟಗಿ ನಿರ್ದೇಶನ ಮಾಡಿದ್ದಾರೆ. ಅರ್ಚನಾ ಜೋಯಿಸ್, ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆಯುವಂತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.