ದೇವನಹಳ್ಳಿ: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನಗಳಿಗೆ ಪ್ರವೇಶ ದರ ನಿಗದಿ ಮಾಡಲಾಗಿದ್ದು ವಾಹನ ಚಾಲಕರು ಏರ್ಪೋಟ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಾಳೆ (ಮೇ.22) ದರ ನಿಗದಿ ವಿರುದ್ಧ ಏರ್ಪೋಟ್ನಲ್ಲಿ ಪ್ರತಿಭಟನೆ ನಡೆಸಲು ವಾಹನ ಚಾಲಕರು ಸಜ್ಜಾಗಿದ್ದಾರೆ. ಏರ್ಪೋಟ್ನಲ್ಲಿ ಆಗಮನದ ದ್ವಾರದ ಬಳಿ ವಾಹನಗಳಲ್ಲಿ ಪ್ರಯಾಣಿಕರನ್ನು ಪಿಕಪ್ ಮಾಡುವುದಕ್ಕೆ ದರ ನಿಗದಿ ಮಾಡಲಾಗಿದೆ.
ಏರ್ಪೋಟ್ ಆಡಳಿತ ಮಂಡಳಿ ನಿನ್ನೆಯಿಂದ ದರ ನಿಗದಿ ಮಾಡಿ ಪಿಕ್ ಅಪ್ ವಾಹನಗಳ ಚಾಲಕರಿಂದ ಹಣ ವಸೂಲಿ ಮಾಡ್ತಿದೆ. ಪಿಕಪ್ಗೆ ಹಣ ವಸೂಲಿ ಮಾಡ್ತಿದ್ದಂತೆ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದಿನ ಚಾಲಕರು ಉಚಿತವಾಗಿ ಪಿಕಪ್ ಮಾಡ್ತಿದ್ದರು. ಆದರೆ ಪಿಕಪ್ ಗೆ ಹೆಚ್ಚುವರಿ ಲೈನ್ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಪ್ರಯಾಣಿಕರನ್ನ ಪಿಕಪ್ ಮಾಡಲು ಪ್ರವೇಶ ದರ 07 ನಿಮಿಷಕ್ಕೆ 150 ರೂ. ನಿಗದಿ ಮಾಡಲಾಗಿದೆ. ಇನ್ನು 07 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತರೆ 300 ರೂ. ಪಾವತಿ ಮಾಡಬೇಕು. ಬಸ್ ಗೆ 600 ರೂಪಾಯಿ, ಟಿಟಿಗೆ 300 ರೂ ಪ್ರವೇಶ ದರ ನಿಗದಿ ಮಾಡಲಾಗಿದೆ. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಕಳೆದ ಭಾನುವಾರ ಈ ಹೊಸ ನಿಯಮವನ್ನ ಜಾರಿ ಮಾಡಿತ್ತು.
ಮತ್ತೊಂದೆಡೆ ಏರ್ಪೋಟ್ ಆಡಳಿತ ಮಂಡಳಿ ಮಾಡಿರುವ ಈ ಹೊಸ ದರ ನಿಗದಿ ಕ್ರಮಕ್ಕೆ ಯಲ್ಲೋ ಹಾಗೂ ವೈಟ್ ಬೋರ್ಡ್ ಚಾಲಕರು ಕಂಗಾಲಾಗಿದ್ದರು. ಅಲ್ಲದೇ ದರ ನಿಗದಿ ವಿರೋಧಿಸಿ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರು ಸೋಮವಾರ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಟ್ತಾಕ್ಸಿ ಮತ್ತು ಕ್ಯಾಬ್ ಚಾಲಕರು ನಿನ್ನೆ ಪ್ರತಿಭಟನೆ ಮಾಡಿದ್ದ ಪರಿಣಾಮ ದರ ನಿಗದಿ ಸಂಗ್ರಹಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಆದರೆ ಆಡಳಿತ ಮಂಡಳಿ ಮತ್ತೆ ಈ ಕ್ರಮ ಶುರು ಮಾಡುತ್ತಾರೆ ಎಂದು ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು ಇಂದು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ. ಅಲ್ಲದೆ ನಾಳೆ ದರ ನಿಗದಿ ವಿರುದ್ಧ ಏರ್ಪೋಟ್ನಲ್ಲಿ ಪ್ರತಿಭಟನೆಗೆ ಚಾಲಕರು ಸಜ್ಜಾಗಿದ್ದಾರೆ.