ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸಮಸ್ಯೆ, ಗೊಂದಲಗಳ ಕಾರಣದಿಂದಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರ ಲಗ್ಗೆ ಇಟ್ಟಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವಾತಂತ್ರ್ಯ ಹೋರಾಟಗಾರರ ಮನೆತನ, ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ರಾಜೀವ್ ಗೌಡ ಅವರು ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ರಾಜ್ಯದ ವಿವಿಧ ಭಾಗಗಳು ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಬಂದ ಜನರು ಬದುಕು ಕಟ್ಟಿಕೊಂಡಿರುವ ಪ್ರದೇಶ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ೮ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರಕ್ಕೆ ಏ.೨೬ ರಂದು ನಡೆದ ಚುನಾವಣೆಯಲ್ಲಿ ಶೇ. ೫೪.೬ ಮತದಾನ ದಾಖಲಾಗಿತ್ತು. ಈ ಕ್ಷೇತ್ರದಲ್ಲಿ ಒಟ್ಟು ೩೨,೧೫,೨೬೧ ಮತದಾರರಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಿಜೆಪಿ ನಾಲ್ಕು ಅವಧಿಯಲ್ಲೂ ಜಯ ಸಾಧಿಸಿತ್ತು. ಸಿ.ಕೆ. ಜಾಫರ್ ಶರೀಫ್ ಅವರನ್ನು ೭ ಬಾರಿ ಈ ಕ್ಷೇತ್ರದ ಮತದಾರರು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿದ್ದರು. ಇಲ್ಲಿ ಮೊದಲ ಎರಡು ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಗೆದ್ದವರೆಲ್ಲ ಕ್ಷೇತ್ರದ ಹೊರಗಿನವರೇ ಎಂಬುದು ವಿಶೇಷ. ಈ ಹಿಂದೆ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ಈಗ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ.