Friday, April 4, 2025
Google search engine

Homeವಿದೇಶಬಾಂಗ್ಲಾದೇಶ: ಪ್ರತಿಭಟನಾಕಾರರ ಎಚ್ಚರಿಕೆಗೆ ಮಣಿದ ಸುಪ್ರೀಂ ಸಿಜೆಐ, ರಾಜೀನಾಮೆಗೆ ನಿರ್ಧಾರ

ಬಾಂಗ್ಲಾದೇಶ: ಪ್ರತಿಭಟನಾಕಾರರ ಎಚ್ಚರಿಕೆಗೆ ಮಣಿದ ಸುಪ್ರೀಂ ಸಿಜೆಐ, ರಾಜೀನಾಮೆಗೆ ನಿರ್ಧಾರ

ಢಾಕಾ(ಬಾಂಗ್ಲಾದೇಶ): ಮೀಸಲಾತಿ ವಿರೋಧದ ಕಿಚ್ಚು ಮುಂದುವರಿದಿರುವ ನಡುವೆಯೇ ಪ್ರತಿಭಟನಾಕಾರರು ಶನಿವಾರ (ಆಗಸ್ಟ್‌ 10) ಬಾಂಗ್ಲಾದೇಶ ಸುಪ್ರೀಂಕೋರ್ಟ್‌ ನ ಚೀಫ್‌ ಜಸ್ಟೀಸ್‌ ಒಂದು ಗಂಟೆ ಅವಧಿಯೊಳಗೆ ರಾಜೀನಾಮೆ ನೀಡುವಂತೆ ಅಂತಿಮ ಗಡುವು ವಿಧಿಸಿದ್ದು, ಈ ಹಿನ್ನಲೆಯಲ್ಲಿ ಸಿಜೆಐ ಒಬೈದುಲ್‌ ಹಸನ್‌ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ದ ಡೈಲಿ ಸ್ಟಾರ್ ವರದಿ ತಿಳಿಸಿದೆ.‌

ಒಂದು ವೇಳೆ ಚೀಫ್‌ ಜಸ್ಟೀಸ್‌ ರಾಜೀನಾಮೆ ನೀಡದಿದ್ದರೆ, ಸುಪ್ರೀಂಕೋರ್ಟ್‌ ಜಡ್ಜ್‌ ಗಳ ನಿವಾಸಗಳನ್ನು ಧ್ವಂಸಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆಯ ಸಂದೇಶ ರವಾನಿಸಿದ್ದರು.

ದೇಶಾದ್ಯಂತ ಇರುವ ಉನ್ನತ ಹಾಗೂ ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರ ರಕ್ಷಣೆಯ ನಿಟ್ಟಿನಲ್ಲಿ ಸಿಜೆಐ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಒಬೈದುಲ್‌ ಹಸನ್‌ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಶನಿವಾರ (ಆ.10) ಸಂಜೆ ತಮ್ಮ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ಧೀನ್‌ ಅವರಿಗೆ ಕಳುಹಿಸುವುದಾಗಿ ಸಿಜೆಐ ಹಸನ್‌ ತಿಳಿಸಿದ್ದಾರೆ. ಚೀಫ್‌ ಜಸ್ಟೀಸ್‌ ಒಬೈದುಲ್‌ ಹಸನ್‌, ದಿಢೀರ್‌ ಸಭೆಯನ್ನು ಕರೆದಿದ್ದಾರೆ ಎಂಬ ಸುದ್ದಿ ಹರಿದಾಡಿದ ನಂತರ ಪ್ರತಿಭಟನೆ ಆರಂಭಗೊಂಡಿತ್ತು.

ವಿದ್ಯಾರ್ಥಿಗಳು, ವಕೀಲರು ಸೇರಿದಂತೆ ಪ್ರತಿಭಟನಾಕಾರರು ಸುಪ್ರೀಂಕೋರ್ಟ್‌ ನತ್ತ ಜಾಥಾ ಹೊರಟಿದ್ದು,ಆವರಣ ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ರಕ್ಷಣೆಗಾಗಿ ಸೇನೆಯನ್ನು ನಿಯೋಜಿಸಲಾಗಿತ್ತು ಎಂದು ವರದಿ ವಿವರಿಸಿದೆ.

ಶೇಖ್‌ ಹಸೀನಾ ಅವರ ಆಪ್ತರಾಗಿರುವ ಸಿಜೆಐ ಒಬೈದುಲ್‌ ಹಸನ್‌, ಬಾಂಗ್ಲಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಧ್ಯಂತರ ಸರ್ಕಾರ ಕಾನೂನು ಬಾಹಿರ ಎಂದು ಘೋಷಿಸುವ ಹುನ್ನಾರ ರೂಪಿಸಿದ್ದರು ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಅಬ್ದುಲ್‌ ಮೊಖ್ದಿಂಮ್‌ ಆರೋಪಿಸಿರುವುದಾಗಿ ವರದಿ ತಿಳಿಸಿದೆ.

ಸಿಜೆಐ ಒಳಸಂಚಿನ ವಿಷಯ ತಿಳಿದ ಮೇಲೆ ನಾವು ಸುಪ್ರೀಂಕೋರ್ಟ್‌ ಆವರಣದ ಬಳಿ ಬಂದು ರಾಜೀನಾಮೆ ನೀಡಲು ಗಡುವು ವಿಧಿಸಿರುವುದಾಗಿ ಮೊಖ್ದಿಂಮ್‌ ತಿಳಿಸಿರುವುದಾಗಿ ದ ಡೈಲಿ ಸ್ಟಾರ್‌ ವರದಿ ಮಾಡಿದೆ.

RELATED ARTICLES
- Advertisment -
Google search engine

Most Popular