ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಸುಮಾರು 7,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.
ಜುಲೈ 18 ರಿಂದ ಆಗಸ್ಟ್ 1 ರವರೆಗಿನ ಅವಧಿಯಲ್ಲಿ ಸುಮಾರು 7,200 ಕ್ಕಿಂತ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದ್ದಾರೆ. ದಾಖಲೆಗಳ ಪ್ರಕಾರ 9 ಸಾವಿರ ವಿದ್ಯಾರ್ಥಿಗಳು ಸೇರಿ 19 ಸಾವಿರ ನಾಗರಿಕರು ಬಾಂಗ್ಲಾದೇಶದಲ್ಲಿದ್ದರು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ತಿಳಿಸಿದ್ದಾರೆ.
ನೆರೆ ದೇಶ ಬಾಂಗ್ಲಾದಲ್ಲಿ ಹಿಂಸಾಚಾರದಿಂದಾಗಿ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳು ಮರಳಿದ್ದು ಅವರಿಗೆ ವಿಶೇಷ ಶಿಬಿರಗಳನ್ನು ತೆರೆಯಲಾಗಿದೆಯೇ? ಮತ್ತು ಅದೆಷ್ಟು ನಾಗರಿಕರನ್ನು ವಾಪಸ್ ಕರೆತರಲಾಗಿದೆ ಎಂದು ಸಚಿವರಿಗೆ ಪ್ರಶ್ನೆ ಕೇಳಲಾಯಿತು.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ರಾಜಸ್ಥಾನ, ಪಶ್ಚಿಮ ಬಂಗಾಳ, ತ್ರಿಪುರ, ಆಸ್ಸಾಂ ಹಾಗೂ ಇನ್ನಿತರ ರಾಜ್ಯಗಳ ವಿದ್ಯಾರ್ಥಿಗಳು ಬಾಂಗ್ಲಾದಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದರು.
ಢಾಕಾ, ಚಿತ್ತಗಾಂಗ್, ರಾಜ್‌ಶಹಿ, ಶೈಲ್ಹೆಟ್ ಮತ್ತು ಖುಲ್ನಾ ಹೈಕಮಿಷನ್‌ಗಳು ಭಾರತದ ಹೈಕಮಿಷನ್‌ನ ಸಂಪರ್ಕದಲ್ಲಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಕಳುಹಿಸಲು ಸಹಾಯ ಮಾಡುತ್ತಿವೆ. ವಿಮಾನ ನಿಲ್ದಾಣ ಮತ್ತು ಭಾರತ- ಬಾಂಗ್ಲಾದೇಶ ಗಡಿಯಲ್ಲಿ ರಕ್ಷಣೆ ಒದಗಿಸುತ್ತೀವೆ ಎಂದರು.