Friday, April 11, 2025
Google search engine

Homeಅಪರಾಧಬ್ಯಾಂಕ್‌ಗೆ ವಂಚನೆ ಆರೋಪ: ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ

ಬ್ಯಾಂಕ್‌ಗೆ ವಂಚನೆ ಆರೋಪ: ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ

ಬೆಂಗಳೂರು: 7.17 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರನ್ನು ವಿಶೇಷ ನ್ಯಾಯಾಲಯ ಗುರುವಾರ ದೋಷಿ ಎಂದು ತೀರ್ಪು ನೀಡಿ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೃಷ್ಣಯ್ಯ ಶೆಟ್ಟಿ, ಸಹ ಆರೋಪಿಗಳಾದ ಶ್ರೀನಿವಾಸ್ ಮತ್ತು ಮುನಿರಾಜು ಅವರು ನಕಲಿ ದಾಖಲೆಗಳನ್ನು ಬಳಸಿ ಖಾಸಗಿ ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ನ್ಯಾಯಾಧೀಶ ಸಂತೋಷ ಗಜಾನನ ಭಟ್ ತೀರ್ಪು ನೀಡಿ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ವಂಚನೆಗೊಳಗಾದ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ತನಿಖೆ ನಡೆಸಿತ್ತು.

ಕ್ರಿಮಿನಲ್ ಪಿತೂರಿ ಮತ್ತು ಫೋರ್ಜರಿ ಸೇರಿದಂತೆ ಹಲವು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಸಿಬಿಐ ತನಿಖೆಯಲ್ಲಿ ಹಗರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.

ವಂಚನೆ 1993 ರಲ್ಲಿ ನಡೆದಿದ್ದು ಕೃಷ್ಣಯ್ಯ ಶೆಟ್ಟಿ ಅವರು ತಮ್ಮ ಸಂಸ್ಥೆ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್ ಮೂಲಕ ಸಾರ್ವಜನಿಕ ವಲಯದ ಉದ್ಯಮಗಳ ಉದ್ಯೋಗಿಗಳಿಗೆ ಹೌಸಿಂಗ್ ಬೋರ್ಡ್ ಸಾಲ ನೀಡುವುದಾಗಿ ಭರವಸೆ ನೀಡಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಸಾಲ ಪಡೆದುಕೊಂಡಿದ್ದು, ಅದರಲ್ಲಿ 3.53 ಕೋಟಿ ರೂ. ಪಾವತಿಯಾಗದೇ ಬಾಕಿ ಉಳಿದಿದೆ.

ಕೋಲಾರದ ಮಾಲೂರಿನ ಮಾಜಿ ಶಾಸಕರಾದ ಕೃಷ್ಣಯ್ಯ ಶೆಟ್ಟಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಯಾಗಿದ್ದರು. ಬಿಜೆಪಿ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದರು. ದೇಗುಲಗಳಲ್ಲಿ ಗಂಗಾಜಲ ಹಂಚಿಕೆ ಮಾಡಿ ಗಮನ ಸೆಳೆದಿದ್ದರು. ಯಡಿಯೂರಪ್ಪ ಜತೆಗೆ 24 ದಿನ ಜೈಲು ವಾಸವನ್ನೂ ಅನುಭವಿಸಿದ್ದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ 2017 ರಲ್ಲಿ ಬಿಜೆಪಿಗೆ ಮರಳಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಬಯಸಿದ್ದರು, ಆದರೆ ಸಪ್ತಗಿರಿ ಗೌಡ ಸ್ಪರ್ಧಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 6,781 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದ್ದರು.

RELATED ARTICLES
- Advertisment -
Google search engine

Most Popular