ಮಂಗಳೂರು (ದಕ್ಷಿಣ ಕನ್ನಡ): ಖಾಸಗಿ ಬಸ್ ಬೈಕ್ ಮಧ್ಯೆ ಅಪಘಾತದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ತುಂಬೆ ಕಡೆಗೋಳಿ ಎಂಬಲ್ಲಿ ರಾತ್ರಿ ನಡೆದಿದೆ. ಪ್ರವೀಣ, ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. ಸ್ನೇಹಿತ ಸಂದೀಪ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಚಾಲಕ ಬಸ್ ನಿಂದ ಇಳಿದು ಪರಾರಿಯಾಗಿದ್ಧಾನೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿದೆ.
ಖಾಸಗಿ ಬಸ್ ಚಾಲಕನ ಅತಿವೇಗದ ಮತ್ತು ಅಜಾಗರೂಕತೆಯ ಚಾಲನೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಬಸ್ ಚಾಲಕನ ಮೇಲೆ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.