Monday, September 22, 2025
Google search engine

Homeಸ್ಥಳೀಯಬಾಗಿನ ಕವಿತೆಯ ಮೂಲಕ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ ಬಾನು ಮುಷ್ತಾಕ್

ಬಾಗಿನ ಕವಿತೆಯ ಮೂಲಕ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ ಬಾನು ಮುಷ್ತಾಕ್

ಮೈಸೂರು : ಮೈಸೂರು ದಸರಾ, ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳವಾಗಿದೆ ಎಂದು ಸಾಹಿತಿ ಹಾಗೂ 2025ರ ಅಂತರಾಷ್ಟ್ರೀಯ ಬೂಕರ್ ಬಹುಮಾನ ವಿಜೇತರಾದ ಬಾನು ಮುಷ್ತಾಕ್ ಅವರು ತಿಳಿಸಿದರು.

ದಸರಾಗೆ ಉರ್ದು ಭಾಷೆಯಲ್ಲಿ ಸಿಲಿಂಗನ್ ಎನ್ನುತ್ತಾರೆ.  ನನ್ನ ಮಾವ ಮೈಸೂರು ಅರಸರ ಅಂಗರಕ್ಷಕರಾಗಿದ್ದರು. ಮಹಾರಾಜರು ಮುಸ್ಲಿಮರನ್ನು ಅನುಮಾನಿಸುತ್ತಿರಲಿಲ್ಲ. ಮುಸ್ಲಿಮರನ್ನು ನಂಬಿ ಅಂಗರಕ್ಷಕರನ್ನಾಗಿ ಮಾಡಿಕೊಂಡಿದ್ದ ಇತಿಹಾಸವನ್ನು ಮೆಲುಕು ಹಾಕಿದರು.

ಸಂಸ್ಕೃತಿ ಎಂದರೆ ಹೃದಯಗಳನ್ನು ಒಟ್ಟುಗೂಡಿಸುವ ಸೇತುವೆ. ನನ್ನ ಜೀವನ ಪಾಠಗಳು ಹೊಸ್ತಿಲ ಗಡಿಯಾಚೆ ದಾಟಿಲ್ಲ. ಈ ನೆಲದ ಸಂಸ್ಕೃತಿ ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಪಾಠ ಕಲಿಸಿದೆ. ಮೈಸೂರು ದಸರಾ ಶಾಂತಿ, ಸೌಹಾರ್ದತೆಯ ಉತ್ಸವ. ಈ ನೆಲದ ಹೂವುಗಳು ಸೌಹಾರ್ದತೆಯಿಂದ ಕೂಡಿವೆ. ದಸರಾ ಹಬ್ಬ ಮೈಸೂರು ನಗರಕ್ಕೆ ಸೀಮಿತವಾಗಬಾರದು. ಇಡೀ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಲಭ್ಯವಾಗಬೇಕು.

ನನ್ನ ಬದುಕು ನನಗೆ ಅನೇಕ ಪಾಠಗಳನ್ನು ಕಲಿಸಿದೆ.  ಇಂದಿನ ಜಗತ್ತು ಯುದ್ದದ ಜ್ವಾಲೆಯಲ್ಲಿ ಸುಡುತ್ತಿದೆ. ಹಗೆಯಿಂದ ಅಲ್ಲ ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು.  ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಈ ಜಗತ್ತನ್ನು ಅಕ್ಷರದಿಂದ ಗೆಲ್ಲಬಹುದು ಎಂದು ಬಾನು ಮುಷ್ತಾಕ್ ಹೇಳಿದರು.

ಈ ದಸರಾದಿಂದ ದ್ವೇಷವನ್ನು ಕಡಿಮೆ ಮಾಡಿಕೊಳ್ಳೋಣ. ಈ ನೆಲದ ಹೂವುಗಳು ಐಕ್ಯತೆಯಿಂದ ಕೂಡಿರಲಿ. ಪ್ರೀತಿಯನ್ನ ಹರಡುವುದೇ ಸಂಸ್ಕೃತಿಯ ಉದ್ದೇಶ. ಈ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸೋಣ. ಈ ನೆಲದ ಬಿಸಿಲು ಕೂಡ ಮಾನವತೆಯ ಪ್ರತೀಕ. ನಾವು ಮಾನವರಾಗಿ ಬದುಕಬೇಕು. ಮಾನವೀಯತೆಯ ಪ್ರೀತಿಯಲ್ಲಿ  ಬದುಕಿ ಬಾಳೋಣ ಎಂದರು.

ಆಗಸ ಯಾರನ್ನೂ ಸೇರಿಸಿಕೊಳ್ಳವುದಿಲ್ಲ. ಭೂಮಿ ಯಾರನ್ನೂ ಬಿಡುವುದಿ. ಇದು ಶಾಂತಿಯ ಹಬ್ಬ. ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧವು ಐಕ್ಯತೆ ಆಗಲಿ ಎಂದು.

ನನಗೆ ಮಂಗಳಾರತಿ ಹೊಸದಲ್ಲ. ನಾನು ಪೂಜೆಯಲ್ಲಿ ಭಾಗಿಯಾಗಿದ್ದೇನೆ. ಮಂಗಳಾರತಿ ಸ್ವೀಕರಿಸಿದ್ದೇನೆ. ನನ್ನ ಹಾಗೂ ಹಿಂದೂ ಧರ್ಮದ ಬಗ್ಗೆ ಬಾಂಧವ್ಯ ಇದೆ. ನನ್ನ ಆತ್ಮಕತೆಯಲ್ಲಿ ಈ ಪ್ರಕರಣಗಳನ್ನು ಮೆಲುಕು ಹಾಕಿದ್ದೇನೆ. ವಿವಾದ ಬಂದರೂ ನನ್ನನ್ನು ದಿಟ್ಟತನದಿಂದ ಸಿಎಂ ಆಹ್ವಾನಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ತಮ್ಮ ಹಳೆಯ ಬಾಗಿನ ಕವನವನ್ನು ವಾಚಿಸಿದ ಅವರು ಮುಸ್ಲಿಂ ಹೆಣ್ಣು ಮಗಳು ಬಾಗಿನ ಸ್ವೀಕರಿಸಿದಾಗ ಆಕೆಯ ಮನಸ್ಸಿನ್ನಲಿ ಉಂಟಾಗುವ ಭಾವನೆಗಳನ್ನು ಬಣ್ಣಿಸಿದರು. ಈ ಮಣ್ಣಿನ ವಾರಸುದಾರಿಕೆ ಎಲ್ಲರಿಗೂ ಇದೆ. ನನ್ನ ಧಾರ್ಮಿಕ ನಂಬಿಕೆಗಳು ಮನೆಯ ಹೊಸ್ತಿಲು ದಾಟಲ್ಲ. ನನ್ನ ನಂಬಿಕೆಗಳು ಮನೆಗಷ್ಟೇ ಸೀಮಿತ ಎಂದು ಹೇಳಿದರು.

  • ಬಾಗಿನ
  • ಮೊರ ಅಂದರೆ ಗೊತ್ತಲ್ಲಾ
  • ಕೇರುತ್ತೆ ಅದು ,ಅಲಿ
  • ಇಲ್ಲಿ ಮತ್ತು ಎಲ್ಲೆಲ್ಲೂ
  • ಆ ದಿನ
  • ಸೇವಂತಿಗೆ ಹೂವು ಚಳ್ಳನೆ ನಗು
  • ಚಿಮುಕಿಸುತ್ತಿತು.ದಿನ ತುಂಬಿದ್ದ
  • ಮೋಡ ಎರಡೂ ಕೈಯಲಿ ಸೊಂಟ
  • ಹಿಡಿದು ಬೆವರಿನಿಂದ ತೊಯ್ದು
  • ಉಸ್ಸೆಂದಾಗ
  • ಆಕಾಶ ಭೂಮಿ ಮತ್ತು ಸಮಸ್ತವೂ ಗಲಗಲ
  • ಅಂತ ಚಿಮ್ಮುತ್ತಿದ್ದವ್ತು.ಅಸೂಯೆಯಿಂದ ಸೂರ್ಯ
  • ಕೆಂಪಾಗಿದ್ದ , ನನಗಿಲ್ಲದ ವಾತ್ಸಲ್ಯದಲ್ಲಿ ಇವಳು
  • ಹೇಗೆ ಮಿನುಗುತ್ತಾಳೆ ಅಂತ
  • ಅದೇನೂ ಎಂದಿನ ದಿನವಾಗಿರಲಿಲ್ಲ
  • ಸಂಭ್ರಮಕೇ ದೊಡ್ಡ ಮುಳ್ಳು ಚಿಕ್ಕ ಮುಳ್ಳು
  • ಅಂಟಿ ಜೂಟಾಟವಾಡುತ್ತಿದ್ದವಲ್ಲಾ
  • ಅಚ್ಚ ಕೃಷಿಕ ಬಸವರಾಜಣ್ಣನ ಎಡ
  • ಹೆಗಲಿನ ವಲ್ಲಿಯೊಡನೆ ಮಣ್ಣಿನ
  • ಗುಣ ಹೀರಿದ್ದ ನಾನು ಬಾನು
  • ವಿನಿಂದ ಜಯಾ ಅಗಿದ್ದು ಹೀಗೆ
  • ಯಾವುದೇ ಗೋಡೆಗಳಿರಲಿಲ್ಲ ಬಿಡಿ
  • ಪ್ರೀತಿಯ ಒಳ ಒರತೆಗಳು
  • ಜಿನುಗುವುದು ಹೀಗೆ ನೋಡಿ
  • ಸಾಬರ ಮಗಳು ಸಾಬರ ಸೊಸೆಗೆ
  • ಜೀವದುಂಬಿದ ಹಸಿ ಮಣ್ಣಿನ ಬಾಗಿನ
  • ಜಯಾ….ನಡಿಯವ್ವ ಹಬ್ಬಕೆ ?
  • ಅರಿಶಿನದ ಎಲೆ ಕಡುಬು
  • ಗಂಡನ ಮನೆಯ ಕಸೂತಿ ನೆರಿಗೆಗಳ
  • ಸದಾ ಚಿಮ್ಮುತ್ತಿದ್ದರೂಎದೆಯಾಳದಲಿ
  • ಪಿಸುಗುಟ್ಟಿದ್ದು ಆ ಎಲೆ ಹಸಿರು
  • ವಾತ್ಸಲ್ಯವ ನೆಯ್ದ ಸಾದಾ ಸೀರೆ
  • ಮಡಿಲಲಿ ತುಂಬಿಸಿ ಕವುಚಿದ ಮೊರವ
  • ಮರಳುವ ದಾರಿಯಲಿ ನಿಂತು
  • ಅರಳಿಮರವ ಕೇಳಿದ್ದೆ
  • ಹೇಗೆ ಕೊಂಡೊಯ್ಯಲಿ ಇದನು
  • ನನ್ನತ್ತೆ ಮನೆಗೆ ಅರಿಶಿನ ಕುಂಕುಮದೊಡನೆ
  • ಹೇಗೆ ಬಿಡಿಸಲಿ ಬಾಂಧವ್ಯದ ಎಳೆಗಳ
  • ರಂಗೋಲಿಯನು ಸಾಬರ ಮನೆ ಬಾಗಿಲಲಿ
  • ಕೊಡಲೇ ಯಾರಿಗಾದರೂ ದಾರಿಹೋಕರಿಗೆ
  • ಕೊಡಬಹುದೇ ಆದನು ಯಾರಿಗಾದರೂ
  • ಆ ಒಲವನು ಬಲವನು
  • ಪಿತೃ ವಾತ್ಸಲ್ಯದ ಮಾತೃತ್ವವನು
  • ನೆನೆಸಿಕೊಂಡಾಗ ಈಗಲೂ
  • ಕಣ್ಣಂಚಿನಲಿ ತೇವ
  • ಮೊರದ ತುಂಬಾ ಬದುಕಿನ ಪಸೆಯ
  • ಹಸೆಯ ಬರೆದ ಬೇಸಿಗೆ ಹಕ್ಕಿಯ ವಿದಾಯ
  • ಬಸವರಾಜಣ್ಣ॒
  • ನೀವು ಕೊಟ್ಟ ಮೊರಹೇಳುತ್ತೆ
  • ಮಿಡಿಯುತ್ತೆ ಸಹಸ್ರ ಆರೋಪಗಳೆದುರು
  • ಒಂಟಿಯಾಗಿ ನಿಲ್ಲುತ್ತೆ ,ದ್ವೇಷದ ಎಲ್ಲಾ
  • ಭಾಷೆಗಳ ಕವುಚಿ ಹಾಕುತ್ತೆ ಮುಂಜಾವಿನ
  • ಹೊಂಬೆಳಕಿನೊಂದಿಗೆ ಪ್ರೀತಿಯ ನಿರ್ಮಲ
  • ಅಲೆಗಳು ಮೊರದ ತುಂಬಾ
  • ತೂರುತ್ತಿರುತ್ತವೆ
RELATED ARTICLES
- Advertisment -
Google search engine

Most Popular