ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಹಿಂದೂ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿರುವ ಪ್ರತಾಪ್ ಸಿಂಹ, ದಸರಾ ಉದ್ಘಾಟನೆಗೆ ಅವರ ಆಹ್ವಾನವನ್ನು ಹಿಂಪಡೆಯುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ದಸರಾ ಉದ್ಘಾಟನೆ ಸಾಮಾನ್ಯ ಕಾರ್ಯಕ್ರಮವಲ್ಲ. ಚಾಮುಂಡೇಶ್ವರಿ ದೇವಿಯ ಗರ್ಭಗುಡಿಯ ಮುಂದೆ ದೀಪ ಹಚ್ಚುವ ಧಾರ್ಮಿಕ ಆಚರಣೆಯು ಈ ಕಾರ್ಯಕ್ರಮದ ಮುಖ್ಯ ಭಾಗವಾಗಿದೆ. ಈ ಆಚರಣೆ ಹಿಂದೂಗಳ ಭಕ್ತಿಭಾವವನ್ನು ಪ್ರತಿಬಿಂಬಿಸುತ್ತದೆ. ಇಂತಹ ಧಾರ್ಮಿಕ ಆಚರಣೆಗೆ ಬೇರೊಂದು ಧರ್ಮದ ವ್ಯಕ್ತಿಗೆ ಆಹ್ವಾನ ನೀಡುವುದು ಹಿಂದೂ ಧರ್ಮೀಯರಿಗೆ ಕಳವಳ ಉಂಟುಮಾಡುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಧರ್ಮದ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಸಂವಿಧಾನದ ಪರಿಚ್ಛೇದ 25 ಹಾಗೂ 26ರ ಉಲ್ಲಂಘನೆಯಾಗಿದ್ದು, ಇದು ಶಾಂತಿ ಭಂಗ ಮತ್ತು ಕೋಮು ಸಂಘರ್ಷದ ಆತಂಕಕ್ಕೂ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಹೀಗಾಗಿ ರಾಜ್ಯ ಸರಕಾರದ ಈ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂದು ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.