ವಿನಯ್ ದೊಡ್ಡಕೊಪ್ಪಲು
ಹೊಸೂರು :ಹಾಲಿನ ನೊರೆಯಂತೆ ಉಕ್ಕಿ ಹರಿಯುತ್ತಿರುವ ಜೀವನದಿ…ನದಿಯ ನರ್ತನದ ವೈಭವ ನೋಡಲು ನೋಡಲು ಎರಡು ಕಣ್ಣು ಸಾಲದು … ನೀರಿನ ರಮಣೀಯ ದೃಶ್ಯವನ್ನು ವಿಕ್ಷಿಸಲು ಪ್ರವಾಹದಂತೆ ಹರಿದು ಬರುತ್ತಿದೆ ಪ್ರವಾಸಿಗರ ಸಂಖ್ಯೆ … ಸೆಲ್ಪಿ ತೆಗಿಯಲು ಮುಗಿ ಬೀಳುತ್ತಿರುವ ಯುವ ಜನತೆ … ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯ ಧನುಷ್ಕೋಟಿ ಜಲಪಾತದಲ್ಲಿ ಕಂಡುಬರುತ್ತಿರುವ ರಮ್ಯರಮಣೀಯ ದೃಶ್ಯವಿದು.
ಕಾವೇರಿ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಈ ನದಿಯ ಕೊನೆಯ ಜಲಪಾತವಾಗಿರುವ ಚುಂಚನಕಟ್ಟೆಯ ಶ್ರೀರಾಮ ದೇವರ ದೇವಸ್ಥಾನದ ಸಮೀಪ ಇರುವ ಈ ಧನುಷ್ಕೋಟಿ ಜಲಪಾತ ಬೋರ್ಗರೆದು ದುಮ್ಮಿಕ್ಕುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದಾಗಿ ಇಲ್ಲಿಗೆ ಸಾವಿರಾರು ಪ್ರವಾಸಿಗರ ದಂಡು ಅಗಮಿಸಿ ಜಲಪಾತದ ವೈಭವವನ್ನು ಸವಿಯುತ್ತಿದ್ದಾರೆ.

ಮಳೆ ಇಲ್ಲದೆ ತನ್ನ ಸೊಬಗನ್ನು ಕಳೆದುಕೊಂಡಿದ್ದ ಈ ಜಲಪಾತವು ಕೊಡಗು ಭಾಗದಲ್ಲಿ ವ್ಯಾಪಕ ಮಳೆ ಮತ್ತು ಹಾರಂಗಿ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ಬಿಟ್ಟಿರುವ ಪರಿಣಾಮವಾಗಿ
ಈಗ ೪೦ಕ್ಕೂ ಹೆಚ್ಚು ಅಡಿ ಎತ್ತರದಿಂದ ನದಿಯ ನೀರು ಬೀಳುತ್ತಿರುವುದರಿಂದ ನೀರು ಹಾಲಿನಂತೆ ಉಕ್ಕುತ್ತಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಕಳೆದ ವರ್ಷ ಜುನ್ ತಿಂಗಳ ಆರಂಭದಲ್ಲಿಯೇ ತುಂಬಿ ಹರಿದಿದ್ದ ಜೀವ ನದಿ ಈ ಭಾರಿ ವರುಣನ ಅವಕೃಪೆಯಿಂದ ಜುಲೈತಿಂಗಳ ಕೊನೆಯಲ್ಲಿ ನದಿಯು ತುಂಬಿ ಹರಿಯುತ್ತಿರುವುದು ಪ್ರಕೃತಿ ಪ್ರಿಯರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ.
ಕೆಲ ತಿಂಗಳಿನಿಂದ ಕಳೆ ಕಳೆದುಕೊಂಡಿದ್ದ ಕಾವೇರಿನದಿಯು ಮತ್ತೆ ತನ್ನ ಪ್ರಕೃತಿ ಸೌಂದರ್ಯವನ್ನು ತುಂಬಿಕೊಂಡಿದ್ದು ಈ ಸೊಬಗನ್ನು ವೀಕ್ಷಿಸಲು ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರಜಿಲ್ಲೆಯ ಪ್ರವಾಸಿಗರ ದಂಡೆ ಹರಿದು ಬರುತ್ತಿದ್ದು ನದಿಯ ನೀರಿನ ರಮಣೀಯ ದೃಶ್ಯವನ್ನು ಕಂಡು ಮೂಖವಿಸ್ಮಿತರಾಗುತ್ತಿದ್ದಾರೆ.

ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ಜಲಪಾತವನ್ನು ವೀಕ್ಷಣೆ ಮಾಡಲು ಹೆಚ್ಚಿನ ರೀತಿಯಲ್ಲಿ ಯುವಕ ಮತ್ತು ಯುವತಿಯರು ಅಲ್ಲದೇ ಪ್ರವಾಸಿಗರು ಬರುತ್ತಿದ್ದು ಜಲಪಾತದ ಜತಗೆ ಇಲ್ಲಿಪ್ರತಿಷ್ಠಾಪಿಸಲಾಗಿರುವ ಅಂಜನೇಯ ದೇವರು ಮತ್ತು ಇಲ್ಲಿನ ಶ್ರೀರಾಮ ದೇವಾಲಯದ ಮುಂದೆ ಇತ್ತಿಚ್ಚಿತನ ದಿನಗಳಲ್ಲಿ ಕ್ರೇಜ್ ಆಗಿರುವ ಸೆಲ್ಪಿ ತೆಗೆದುಕೊಳ್ಳಲು ತಾಮುಂದು ನಾ ಮುಂದು ಎಂಬಂತೆ ಮುಗಿ ಬೀಳುತ್ತಿರುವುದು ಇದೀಗ ಇಲ್ಲಿ ಸಾಮಾನ್ಯವಾಗಿದೆ.
ಇದೇ ರೀತಿ ನದಿಯ ಕೂದಲೆಳೆ ದೂರದಲ್ಲಿ ಇರುವ ರಾಮಸಮುದ್ರ ಅಣ್ಣೆಮಟ್ಟೆ ಮತ್ತು ಚುಂಚನಕಟ್ಟೆಯಿದ ಸುಮಾರು ೭ ಕಿ.ಮೀ ದೂರದಲ್ಲಿರುವ ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಚಾಮರಾಜ ನಾಲೆಯ ಅಣ್ಣೆಕಟ್ಟೆಯ ಮೇಲೆ ಕಾವೇರಿ ನದಿಯ ನೀರು ಮೈದುಂಬಿ ಹರಿಯುವ ದೃಶ್ಯ ನಯನಮನೋಹರವಾಗಿದ್ದು ಇಲ್ಲಿಗೂ ಸಹ ಪ್ರವಾಸಿಗರ ದಂಡು ಹೆಚ್ಚಾಗಿ ಕಂಡು ಬರುತ್ತಿದೆ.
ನದಿಗೆ ಇಳಿಯ ಬೇಡಿ
ಕಾವೇರಿ ನದಿಯಲ್ಲಿ ಸದ್ಯ 15 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ಇದರ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿದ್ದು ಪ್ರವಾಸಿಗರು ನದಿಯ ದಡದ ಸಮೀಪ ಮತ್ತು ನೀರಿಗೆ ಇಳಿಯ ಬಾರದು.
ಗುರುರಾಜು ಎಇಇ
ನಂ-5 ನೀರಾವರಿ ಇಲಾಖೆ ಕೆ.ಆರ್.ನಗರ
ದೇವಾಲಯದ ಒಳಗಡೆ ಶಬ್ದ ಕೇಳುವುದಿಲ್ಲ
ಕಾವೇರಿ ನದಿಯ ಧನುಷ್ಕೋಟಿ ಜಲಪಾತದ ಶಬ್ದವು ಹತ್ತಾರು ಕಿ.ಮಿ.ದೂರಕ್ಕೆ ಕೇಳಿದರು ನದಿಯ ದಡಲ್ಲಿರುವ ಶ್ರೀರಾಮ ದೇವಾಯಲದ ಗರ್ಭ ಗುಡಿಯ ಒಳಗಡೆ ಮಾತ್ರ ಕೇಳದಿರುವುದು ವಿಶೇಷವಾಗಿದ್ದು ಹೆಣ್ಣಿಗೆ ಇಷ್ಟೋ0ದು ಕೋಪ ಇರಬಾರದು ಎಂದು ಋಷಿ ಮುನಿಗಳು ಶಾಪ ನೀಡಿರುವುದೇ ಕಾರಣವಾಗಿದೆ
ವಾಸುದೇವನ್
ಪ್ರಧಾನ ಅರ್ಚಕ
ಶ್ರೀರಾಮ ದೇವಾಲಯ ದೇವಾಲಯ
ಚುಂಚನಕಟ್ಟೆ