ಬಾಗಲಕೋಟೆ: ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಹಾಲು ನೀಡಿ ನಾಗರಪಂಚಮಿ ಬದಲು ಬಸವಪಂಚಮಿ ಆಚರಿಸಲಾಯಿತು.
ಮಾನವ ಬಂಧುತ್ವ ವೇದಿಕೆ ಮುಧೋಳ ತಾಲೂಕಾ ಘಟಕದಿಂದ ನಗರದ ವಿಜಯ ಅನಾಥಾಶ್ರಮದಲ್ಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಆಶ್ರಮದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರಪಂಚಮಿ ಬದಲು ಅರ್ಥಪೂರ್ಣವಾಗಿ ಬಸವಪಂಚಮಿ ಆಚರಿಸಲಾಯಿತು.
ಈ ವೇಳೆ ದಲಿತ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಮಾಲಗಿ ಮಾತನಾಡಿ, ನಾಗರಪಂಚಮಿ ದಿನದಂದು ನಾಡಿನಾದ್ಯಂತ ಮಹಿಳೆಯರು ಹಾವಿನ ಹುತ್ತ ಹಾಗೂ ಕಲ್ಲು ನಾಗರ ಪ್ರತಿಮೆಗಳಿಗೆ ಹಾಲೆರೆದು ಅಪಾರ ಪ್ರಮಾಣದ ಹಾಲನ್ನು ಪೋಲು ಮಾಡುತ್ತಾರೆ. ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ ಎನ್ನುವುದು ಸಾಬೀತಾಗಿದ್ದುರು ಮೌಢ್ಯ ಆಚರಣೆ ಮುಂದುವರಿದಿದೆ. ಇಂತಹ ಅನೇಕ ಮೂಢನಂಬಿಕೆಯ ಆಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಲೋಕೋಪಯೋಗಿ ಸಚಿವ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನ ಮಾಡುತ್ತ ಬಂದಿದ್ದೇವೆ. ಪ್ರತಿ ವರ್ಷವೂ ನಾಗರ ಪಂಚಮಿ ದಿನ ಲಕ್ಷಾಂತರ ಲೀಟರ್ ಹಾಲನ್ನು ಹಾಳು ಮಾಡುವ ಬದಲು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವೃದ್ಧರಿಗೆ ಹಾಲು ನೀಡಿ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಲವಾರ್, ಕಾಂಗ್ರೆಸ್ ಮುಖಂಡ ಹನಮಂತಗೌಡ ಪಾಟೀಲ್, ಕಾನಿಪ ತಾಲೂಕಾ ಅಧ್ಯಕ್ಷ ರತ್ನಾಕರ ಶೆಟ್ಟಿ, ಪತ್ರಕರ್ತ ಗಣೇಶ್ ಮೆತ್ರಿ ವಾಲ್ಮೀಕಿ ಯುವ ವೇದಿಕೆ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭಾವಿದಂಡಿ, ರಂಗನಾಥ್ ಆಡಿನ್, ಸಾಗರ ಅರಳಿಕಟ್ಟಿ ಸೇರಿದಂತೆ ಇತರರು ಇದ್ದರು.