Saturday, April 19, 2025
Google search engine

Homeಸ್ಥಳೀಯಬಸವಣ್ಣನ ತತ್ವಗಳು ಎಂದೆಂದಿಗೂ ಶಾಶ್ವತ: ಸುತ್ತೂರು ಶ್ರೀ

ಬಸವಣ್ಣನ ತತ್ವಗಳು ಎಂದೆಂದಿಗೂ ಶಾಶ್ವತ: ಸುತ್ತೂರು ಶ್ರೀ

ಮೈಸೂರು: ಬಸವಣ್ಣ ಗತಿಸಿ ೯ ಶತಮಾನಗಳಾಗಿದ್ದರೂ ಅವರು ಹಾಕಿಕೊಟ್ಟ ತತ್ವಗಳು ಎಂದೆಂದಿಗೂ ಶಾಶ್ವತ. ಬುದ್ಧ, ಬಸವ, ಗಾಂಧಿ ಅಂಬೇಡ್ಕರ್ ಇವರಲ್ಲೆಲ್ಲರ ಪರಿಶ್ರಮ ಈ ಜಗತ್ತು ಇರುವವರೆಗೂ ಶಾಶ್ವತವಾಗಿರುತ್ತದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧಯನ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಬಸವ ಜಯಂತಿ ಮತ್ತು ಶೂನ್ಯ ಸಂಪಾದನೆ ಒಂದು ದಿನದ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನ ಸಮಗ್ರ ಕ್ರಾಂತಿಗೆ ಅಲ್ಲಮ ಪ್ರಭು ನೇತೃತ್ವ ವಹಿಸಿದರು. ಬಸವಣ್ಣ ಮತ್ತು ಅಲ್ಲಮನ ನಡುವೆ ಕಾಣುವ ಮುಖ್ಯ ವ್ಯತ್ಯಾಸವೆಂದರೆ, ಎಲ್ಲದರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರಿದೂಗಿಸಿಕೊಂಡು ಒಟ್ಟಿಗೆ ಹೋಗುವ ವ್ಯಕ್ತಿತ್ವ ಬಸವಣ್ಣನವರದಾದರೆ, ತನಗೆ ಕಂಡದ್ದನ್ನು ಕಂಡಹಾಗೆ ದಿಟ್ಟತನದಿಂದ ಅಭಿವ್ಯಕ್ತಗೊಳಿಸುವ ವ್ಯಕ್ತಿತ್ವ ಅಲ್ಲಮ ಪ್ರಭುವಿನದು. ಈ ಎರಡರ ಸಂಯೋಜನೆಯಿಂದಲೇ ಅನುಭವ ಮಂಟಪ ಸ್ಥಾಪಿತವಾಗಿದೆ ಎಂದು ಹೇಳಿದರು.

ಒಬ್ಬ ಮನುಷ್ಯನ ಆಧ್ಯಾತ್ಮಿಕ ಮತ್ತ ಲೌಕಿಕ ಬದುಕಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇವರುಗಳು ಮಾಡಿದ ನಿರಂತರ ಪ್ರಯತ್ನಗಳಿಗೆ ಯಶಸ್ಸು ಲಭಿಸಿದೆ ಎಂದು ಹೇಳಿದರು.
ಬಸವಣ್ಣ ತಮ್ಮ ಬದುಕನ್ನೆ ಒಂದು ಪ್ರಾಯೋಗಿಕ ಶಾಲೆಯಾಗಿ ಮಾಡಿಕೊಂಡವರು. ಜಗತ್ತನ್ನು ಸುಧಾರಿಸುವವರು ಮೊದಲು ತನ್ನನ್ನು ಸುಧಾರಿಸಿಕೊಳ್ಳಬೇಕು ಎಂದು ಸ್ವತಃ ತಾವೇ ಅದನ್ನು ಪರಿಪಾಲಿಸಿದವರು. ತನ್ನ ಬದುಕು ಉತ್ತಮವಾಗಿದ್ದರೆ ಮಾತ್ರ ಇನ್ನೊಬ್ಬರ ಬದುಕಿಗೆ ಮಾರ್ಗದರ್ಶಕನಾಗಲು ಸಾಧ. ಅದರಂತೆ ಕೇವಲ ಮಾತು ಆದರ್ಶವಾಗದೆ ನಡೆ ಆದರ್ಶವಾಗಬೇಕು ಎಂಬ ತತ್ವದಂತೆ ನಡೆದು ತೋರಿಸಿದರು. ಇತ್ತೀಚೆಗೆ ಲೋಕಾರ್ಪಣೆಗೊಂಡ ನೂತನ ಸಂಸತ್ ಭವನದಲ್ಲಿ ಸ್ಥಾಪನೆ ಮಾಡಿರುವ ಭಾರತ ಮಂಟಪಕ್ಕೆ ಪ್ರೇರಣೆ ಹನ್ನೆರಡನೇ ಶತಮಾನದ ಅನುಭವ ಮಂಟಪ ಎಂದು ಪ್ರಧಾನ ಮಂತ್ರಿಯೂ ಒಪ್ಪಿದ್ದಾರೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಒಂದು ಕಾಲದಲ್ಲಿ ಜಗತ್ ಪ್ರಸಿದ್ದಿ ಪಡೆದ ವಿಶ್ವವಿದ್ಯಾನಿಲಯವಾಗಿತ್ತು. ಸಂದರ್ಶನವಿಲ್ಲದೇ ನೇಮಕಾತಿ ನಡೆಯುತ್ತಿದ್ದ ಕೆಲವೇ ವಿಶ್ವವಿದ್ಯಾನಿಯಲ್ಲಿ ಇದು ಕೂಡ ಒಂದು ಎಂಬುದು ಅನೇಕ ವಿದ್ಯಾರ್ಥಿಗಳಿಗೆ ಇಂದಿಗೂ ತಿಳಿದಿಲ್ಲ ಎಂದು ಹೇಳಿದರು.
ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಎ.ಮುರುಗಪ್ಪ ಮಾತನಾಡಿ, ವಚನಗಳು ಉತ್ಪನ್ನವಾದರೆ, ಶೂನ್ಯ ಸಂದಾಪನೆ ಪ್ರಕ್ರಿಯೆ ಇದ್ದಹಾಗೆ. ಶರಣ ಸಾಹಿತ್ಯ ಚಳವಳಿಯ ಮುಂದುವರಿಕೆಯಾಗಿ ಶೂನ್ಯ ಸಂಪಾದನೆ ಬಂದಿದೆ. ಬಸವಣ್ಣ ಜನರ ಸಂಕಟ ಅರ್ಥಮಾಡಿಕೊಂಡು ಅವರಿಗಾಗಿ ದುಡಿದವರು ಅರಮನೆಯಲ್ಲಿದ್ದು ಅರೆ ಮನೆಯವರಿಗಾಗಿ ದುಡಿದವರು. ಬಸವಣ್ಣ ಮೊದಲು ತಾನು ನುಡಿದಂತೆ ನಡೆದು ನಂತರ ಇತರರಿಗಾಗಿ ಬೋಧನೆ ಮಾಡಿದರು. ಯಾವುದೇ ಸಮಾಜದಲ್ಲಿ ಸುಧಾರಣೆ ಮಾಡುವುದು ಅಷ್ಟು ಸುಲಭವಲ್ಲ. ಜಡ್ಡುಗಟ್ಟಿದ ವ್ಯವಸ್ಥೆ ಸರಿಪಡಿಸಲು ಇಚ್ಛಾಶಕ್ತಿ ಬಹಳ ಮುಖ್ಯ ಎಂದು ಹೇಳಿದರು.

ಬಸವಣ್ಣನ ಕಾರ್ಯ ಗಮನಿಸಿದರೆ ಮೈರೋಮಾಂಚನವಾಗುತ್ತದೆ. ಬಸವಾದಿ ಶರಣರೆಲ್ಲ ಕಾಯಕವಾದಿಗಳು. ಕಾಯಕ ಎಂದರೆ ಕೇವಲ ಕೆಲಸವಲ್ಲ ಇದೊಂದು ಪಾರಿಭಾಷಿಕ ಪದವಾದರೂ ಇದರಲ್ಲಿ ನಡೆ ನುಡಿ ಇದೆ. ಅಂದಿನ ಬಸವಣ್ಣನನ್ನು ಇಂದು ಹೇಗೆ ನೋಡುತ್ತಿದ್ದೇವೆ ಎಂದುದನ್ನು ಅವಲೋಕಿಸಬೇಕು. ಬಸವಣ್ಣನ ಆಲೋಚನೆಗಳಿಗೂ, ಗಾಂಧಿ ತತ್ವಗಳಿಗೂ ಸಾಮಿಪ್ಯವಿದೆ. ಬಸವಣ್ಣನ ಕಲ ಬೇಡ ಕೊಲಬೇಡ ಎಂಬ ತತ್ವವೂ ಗಾಂಧಿ ಮತ್ತು ಬುದ್ಧನ ತತ್ವದಲ್ಲಿದೆ. ಬಸವಣ್ಣ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.
ಶೂನ್ಯ ಸಂಪಾದನೆ ಒಂದು ಪ್ರಕ್ರಿಯೆ. ಅದು ವೀರಶೈವ ಧರ್ಮಕ್ಕೆ ಒಂದು ಸಂಹಿತೆ ಇದ್ದಹಾಗೆ. ಇದರ ಮೂಲಧಾರಿ ಅಲ್ಲಮ ಪ್ರಭು. ಆದರೆ ಅಲ್ಲಮ ಪ್ರಭು ಸಂಪೂರ್ಣವಾಗಿ ಆಧ್ಯಾತ್ಮಿಕಕ್ಕೆ ಮುಖ ಮಾಡಿದರು. ಶೂನ್ಯ ಸಂಪಾದನೆ ಎಂದರೆ ಏನು ಇಲ್ಲ ಎಂದರ್ಥವಲ್ಲ ಎಲ್ಲವನ್ನೂ ಒಳಗೊಂಡವರು ಎಂದರ್ಥ. ಶೂನ್ಯ ಸಂಪಾದನೆ ಒಂದು ಪ್ರಸಂಗವಾಗಿದ್ದು, ಇದನ್ನು ಒಳ್ಳೆಯ ರಂಗ ಪ್ರಯೋಗ ಮಾಡಬಹುದು ಎಂದು ಹೇಳಿದರು. ಕುವೆಂಪು ಕನ್ನಡ ಅಧಯನ ವಿಭಾಗದ ಮುಖ್ಯಸ್ಥೆ ಡಾ.ವಿಜಯಕುಮಾರಿ ಕರಿಕಲ್, ಬಸವೇಶ್ವರ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರಯ್ಯ ಇದ್ದರು.

ಮೈಸೂರು ವಿವಿಯನ್ನು ಇಂದು ಒಂದು ಜಿಲ್ಲೆಗೆ ಮಾತ್ರ ಸೀಮಿತಗೊಳಿಸುತ್ತಿರುವುದರಿಂದ ವಿವಿಯ ದಾಖಲಾತಿ ಮತು ಆದಾಯವೂ ಶೇ.೧೦೦ರಿಂದ ಶೇ.೪೦ಕ್ಕೆ ಇಳಿದಿದೆ. ಎಲ್ಲಾ ವಿಭಾಗದಲ್ಲಿಯೂ ಇದೇ ಸಮಸ್ಯೆಯಿದೆ. ಆದ್ದರಿಂದ ಹಣಕಾಸು ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕಿದೆ.
-ವಿ.ಆರ್.ಶೈಲಜಾ, ಮೈಸೂರು ವಿವಿ ಕುಲಸಚಿವೆ

RELATED ARTICLES
- Advertisment -
Google search engine

Most Popular