ಮೈಸೂರು: ನಗರದ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿಜಯನಗರದ ಜಿಲ್ಲಾ ಕಸಾಪ ಭವನದಲ್ಲಿ ನಡೆದ ರಾಣಿ ಬೆಳವಾಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಲ್ವರು ಸಾಧಕರಿಗೆ ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಎಚ್.ಪಿ.ಪೂರ್ಣಿಮಾ, ಸಂಘಟನೆ ಕ್ಷೇತ್ರದಲ್ಲಿ ಎಲ್.ರುದ್ರಮೂರ್ತಿ, ಸಿನಿಮಾ ಕ್ಷೇತ್ರದಲ್ಲಿ ಸುಪ್ರೀತ್ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರದ ಸೇವೆಗಾಗಿ ಶೋಭಾ ಸುನೀಲ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ಸಾಧಕರನ್ನು ಗೌರವಿಸಿದರೆ ಅವರ ಸಾಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತೆ. ಜತೆಗೆ ಉಳಿದ ಸಾಧಕರಿಗೂ ಮತ್ತಷ್ಟು ಸಮಾಜ ಸೇವೆ ಮಾಡುವ ಉತ್ಸಾಹ ತುಂಬಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಮಾಜದ ಕಣ್ಣುಗಳಾಗಿರುವ ಇಂತಹ ಸಾಧಕರನ್ನು ಗೌರವಿಸುವ ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಸಂಸ್ಕೃತ ವಿದ್ವಾಂಸೆ ಡಾ.ಕೆ.ಲೀಲಾ ಪ್ರಸಾದ್ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾರಿದೀಪ ಟ್ರಸ್ಟ್ ಅಧ್ಯಕ್ಷ ಎಂ.ಪ್ರದೀಪ್ ಕುಮಾರ್, ಬಸವಭೂಷಣ ಪ್ರಶಸ್ತಿ ಪುರಸ್ಕೃತೆ ವಿದ್ಯಾ, ಲಿಂಗಾಯತಗೌಡ ಮಹಾಸಭಾ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಮುಂತಾದವರು ಹಾಜರಿದ್ದರು.