ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪಶುಪಾಲನಾ ವಿಭಾಗ, ರೇಬಿಸ್ ಲಸಿಕಾಕರಣ ಹಾಗೂ ಸಂತಾನಹರಣ (ABC) ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿದ್ದು, ನಗರದ ವಿವಿಧ ವಲಯಗಳಲ್ಲಿ ಈ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.
ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಪಶ್ಚಿಮ ವಲಯದಲ್ಲಿ ಸುಮಾರು 69,341 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಲ್ಲೇ 465 ನಾಯಿಗಳಿಗೆ ರೇಬಿಸ್ ವಿರೋಧಿ ಲಸಿಕೆ ನೀಡುವುದರ ಜೊತೆಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಇದೇ ವೇಳೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಸವೇಶ್ವರನಗರ ವಾರ್ಡ್‌ನಲ್ಲಿ ಲಸಿಕಾ ಅಭಿಯಾನದ ಅನುಷ್ಠಾನ ಕುರಿತು ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು. ಲಸಿಕೆ ಮತ್ತು ಸಂತಾನಹರಣ ಕಾರ್ಯಗಳು ಯಾವುದೇ ಲೋಪವಿಲ್ಲದೆ ಪರಿಣಾಮಕಾರಿಯಾಗಿ ನಡೆಯುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪಶ್ಚಿಮ ವಲಯ ಮಾತ್ರವಲ್ಲದೆ, ನಗರದ ಉಳಿದ ಎಲ್ಲ ವಲಯಗಳಲ್ಲೂ ಬೀದಿ ನಾಯಿಗಳ ಸಂತಾನಹರಣ ಹಾಗೂ ಲಸಿಕಾಕರಣ ಕಾರ್ಯವನ್ನು ವೇಗಗೊಳಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿಗಳ ಆರೋಗ್ಯ ಎರಡಕ್ಕೂ ಸಮಾನ ಆದ್ಯತೆ ನೀಡಲಾಗುತ್ತಿದೆ.
ಇನ್ನೊಂದೆಡೆ, ಶ್ವಾನ ಪ್ರಿಯರಿಗಾಗಿ ಜಿಬಿಎ ವಿಶೇಷ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಿದೆ. ಜುಲೈ 18ರಂದು ಮಧ್ಯಾಹ್ನ 3 ಗಂಟೆಗೆ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ‘ಸೆಕೆಂಡ್ ಇನ್ನಿಂಗ್ಸ್’ ಹೆಸರಿನ ಕಾರ್ಯಕ್ರಮ ನಡೆಯಲಿದೆ. ಅಪಘಾತ, ಕ್ರೌರ್ಯ ಅಥವಾ ಅನಾಥ ಸ್ಥಿತಿಯಿಂದ ರಕ್ಷಿಸಿ ಚಿಕಿತ್ಸೆ ನೀಡಿರುವ ಆರೋಗ್ಯವಂತ ದೇಸಿ ತಳಿಯ ನಾಯಿಗಳನ್ನು ಈ ಕಾರ್ಯಕ್ರಮದಲ್ಲಿ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.



