ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ನಿಷೇಧ
ಬೆಂಗಳೂರು: ಸೆ.7ರಂದು ಗೌರಿ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿಇಂದು(ಶುಕ್ರವಾರ) ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಭೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ ಸೇರಿ ಹಬ್ಬ ಆಚರಣೆಗೆ ಏನೆಲ್ಲಾ ನಿಯಮಗಳನ್ನು ಜಾರಿ ಮಾಡಬೇಕು ಎಂಬ ಕುರಿತು ಚರ್ಚೆ ನಡೆಸಿದರು.
ಬೆಂಗಳೂರು ಜಿಲ್ಲಾಧಿಕಾರಿ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಇಲಾಖೆ, ವಾಯು ಮಾಲಿನ್ಯ ಮಂಡಳಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಬಾರಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ನಿಷೇಧ ಮಾಡಲಾಗಿದೆ.
ಈಗಾಗಲೇ ಪಿಒಪಿ ಗಣೇಶಗಳನ್ನು ಸೀಜ್ ಮಾಡಲಾಗಿದೆ. ಇನ್ನು ಗಣೇಶನ ಪ್ರತಿಷ್ಠಾಪನೆ ಮಾಡುವವರಿಗೆ ಈ ಬಾರಿ ಯಾವುದೇ ನಿರ್ಬಂಧಗಳು ಇಲ್ಲ. ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ 24 ಗಂಟೆಯೊಳಗೆ ಪರ್ಮಿಷನ್ ಕೊಡಲು ಆಯಾ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಕಳೆದ ಬಾರಿ 5 ಅಡಿ ಎತ್ತರದೊಳಗಿನ ಗಣೇಶ ಮೂರ್ತಿ ಮಾತ್ರ ಪ್ರತಿಷ್ಠಾಪನೆ ಮಾಡಲು ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಈ ಬಾರಿ ಮೂರ್ತಿಗಳ ಎತ್ತರಕ್ಕೆ ಯಾವುದೇ ನಿರ್ಬಂಧ ಏರಿಲ್ಲ. ಬೆಸ್ಕಾಂ ಅಧಿಕಾರಿಗಳಿಗೆ ಗಣೇಶನ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಗಣೇಶ ವಿಸರ್ಜನೆ ಮಾಡುವ 42 ಕೆರೆ ಹಾಗೂ ಕಲ್ಯಾಣಿ ಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಇನ್ನು ಕಲ್ಯಾಣಿ ಬಳಿ ಆಂಬ್ಯುಲೆನ್ಸ್ ಹಾಗೂ ಅಗ್ನಿ ಶಾಮಕದಳದ ವಾಹನ ನಿಲುಗಡೆ ಮಾಡಲು ಹಾಗೂ ನಗರದ ಮನೆ ಮನೆ ಗಣಪನ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.