ಬೆಂಗಳೂರು : “ಈ ಬಾರಿಯ ಬಿಬಿಎಂಪಿ ಬಜೆಟ್ ಅಲ್ಲಿ ಪೌರಕಾರ್ಮಿಕರ ವೇತನ ಪಾವತಿಗೆ ರೂ.500 ಕೋಟಿ ಹಣ ಘೋಷಣೆ ಮಾಡಲಾಗಿದೆ. ರೂ. 107 ಕೋಟಿ ಹಣವನ್ನು ಪಿಂಚಣಿಗೆ ಮೀಸಲಿಡಲಾಗಿದೆ. ಮೃತಪಟ್ಟವರ ಹೆಸರಿನಲ್ಲಿ ರೂ.10 ಲಕ್ಷ ಹಣ ಮೀಸಲಿಟ್ಟು ರೂ. 6 ಸಾವಿರ ಪಿಂಚಣಿ ನೀಡುವ ಯೋಜನೆ ತರಲಾಗಿದೆ. ಪೌರಕಾರ್ಮಿಕರಿಗಾಗಿ ಬಿಬಿಎಂಪಿಯಿಂದ ಒಟ್ಟು ರೂ.730 ಕೋಟಿ ಹಣ ನಾವು ಮೀಸಲಿಟ್ಟಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು.
“ಶೂ, ಕೈಗವಸು ಸೇರಿದಂತೆ ಇತರೇ ಸಲಕರಣೆಗಳ ವಿತರಣೆಗೆ ರೂ.5 ಕೋಟಿ, ಸಮವಸ್ತ್ರಕ್ಕೆ ರೂ. 6 ಕೋಟಿ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಮರುಪಾವತಿಗೆ ರೂ. 6 ಕೋಟಿ, ಆರೋಗ್ಯಕ್ಕೆ ರೂ.4 ಕೋಟಿ, ಒಂಟಿ ಮನೆಗೆ ಪ್ರತ್ಯೇಕವಾಗಿ ರೂ.30 ಕೋಟಿ, ಕೌಶಲ್ಯ ಅಭಿವೃದ್ದಿಗೆ ರೂ.5 ಕೋಟಿ, ಟ್ಯಾಕ್ಸಿ, ಆಟೋ ಚಾಲಕರಿಗೆ ರೂ. 10 ಕೋಟಿ ಒಟ್ಟು ನಿಮ್ಮ ಕಲ್ಯಾಣಕ್ಕೆ ರೂ. 64 ಕೋಟಿ ಮೀಸಲಿಡಲಾಗಿದೆ” ಎಂದು ಹೇಳಿದರು.
“ಪೌರಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತರುವುದೇ ಕಾಂಗ್ರೆಸ್ ಸರ್ಕಾರದ ಸಂಕಲ್ಪ. ಪೌರಕಾರ್ಮಿಕರು ನಮ್ಮ ಹಾಗೂ ದೇಶದ ಶಕ್ತಿ, ಕಾಂಗ್ರೆಸ್ ಸರ್ಕಾರ ನಿಮ್ಮ ಶಕ್ತಿ ಎಂಬುದನ್ನು ಮರೆಯಬಾರದು. ನಿಮ್ಮ ಕೆಲಸ ಖಾಯಂ ಆದ ತಕ್ಷಣ ನಿಮಗೆ ಬರುವ ಸಂಬಳ 50 ಸಾವಿರ ಮುಟ್ಟುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
“ಮನೆಯಲ್ಲಿ ನಾವು ವೈಯಕ್ತಿಕವಾಗಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುತ್ತೇವೆ. ಮನೆಯನ್ನು ಸ್ವಚ್ಚಗೊಳಿಸುತ್ತೇವೆ, ಹಾಗಾದರೆ ನಾವೂ ಸಹ ಪೌರ ಕಾರ್ಮಿಕರಲ್ಲವೇ. ನಾವು ಮನೆಯನ್ನು ಸ್ವಚ್ಚಗೊಳಿಸುತ್ತೇವೆ. ನೀವು ಪುರವನ್ನು ಸುಂದರಗೊಳಿಸತ್ತೀರಿ. ನಾವು ಒಳಗಡೆ, ನೀವು ಹೊರಗಡೆ. ಆದ ಕಾರಣ ನಮ್ಮ ನಿಮ್ಮ ನಡುವೆ ಯಾವುದೇ ಬೇಧ ಭಾವವಿಲ್ಲ” ಎಂದರು. “ನನಗೆ ಇಂದೇ ನಿಮಗೆ ನೇಮಕಾತಿ ಪತ್ರ ನೀಡಬೇಕು ಎನ್ನುವ ಆಲೋಚನೆ ಇತ್ತು. ಒಂದಷ್ಟು ಸಿಂದುತ್ವ ಬಾಕಿ ಇರುವ ಕಾರಣ ಮೇ 1 ರಂದು ನೇಮಕಾತಿ ಪತ್ರ ನಿಮ್ಮ ಕೈ ಸೇರುವುದು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ನಾನು ಸಲಹೆ ನೀಡಿದೆ. ವಾಹನ ಚಾಲಕರು, ಲೋಡರ್ಸ್ ವಿಚಾರವಾಗಿ ನಾರಾಯಣ ಅವರು ಗಮನ ಸೆಳೆದಿದ್ದಾರೆ. ಅವರ ಮನವಿಯನ್ನು ಕಾರ್ಯಗತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
“ಪೌರ ಕಾರ್ಮಿಕರ ಖಾಯಂ ವಿಚಾರದಲ್ಲಿ ಒಂದಷ್ಟು ಅಧಿಕಾರಿಗಳು ಸಿಂಧುತ್ವ ನೀಡುವುದಕ್ಕೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ದೂರುಗಳು ಬರುತ್ತಿವೆ. ಯಾರೂ ಸಹ ಒಂದೇ ಒಂದು ರೂಪಾಯಿ ಹಣ ನೀಡಬಾರದು. ಹಣ ಕೇಳಿದರೆ ನನಗೆ ಲಿಖಿತವಾಗಿ ದೂರು ನೀಡಬೇಕು. ಸಿಂಧುತ್ವ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು” ಎಂದು ತಿಳಿಸಿದರು.
“ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು. ಏನೊ ಎಂದು ಚಿಂತಿಸದಿರು, ನಿನ್ನ ಜೊತೆ ನಾನಿರುವೆ ಕೂಡಲಸಂಗಮದೇವಾ ಎಂದು ಬಸವಣ್ಣ ಅವರು ಹೇಳಿದ್ದಾರೆ. ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ನಿಮ್ಮ ಜೊತೆ ಸದಾ ಇರುತ್ತದೆ” ಎಂದು ಭರವಸೆ ನೀಡಿದರು.
“ಯಾರೂ ಯಾರನ್ನೂ ಕೀಳಾಗಿ ನೋಡಬಾರದು. ಮಾನವಧರ್ಮವೇ ಅಂತಿಮವಾದುದು, ಸಂವಿಧಾನದ ಮೂಲಕ ಸಮಾನತೆಯನ್ನು ಸ್ಥಾಪಿಸಲು ಕಾಂಗ್ರೆಸ್ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಿಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಗಳಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬುದು ನಮ್ಮ ಅಭಿಲಾಷೆ” ಎಂದು ಹೇಳಿದರು.
“2013 ರ ಸರ್ಕಾರದ ಅವಧಿಯಲ್ಲಿ ನಿಮ್ಮ ಪರವಾಗಿ ಅನೇಕ ಕೆಲಸಗಳನ್ನು ಮಾಡಿದ್ದೇವೆ. 1 ಸಾವಿರ ಪೌರ ಕಾರ್ಮಿಕರನ್ನು ವಿದೇಶಿ ಪ್ರವಾಸಕ್ಕೆ ಕಳಿಸಿಕೊಡಲಾಗಿತ್ತು. 2017ರಲ್ಲಿ 10 ಸಾವಿರ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. 7.50 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿತ್ತು” ಎಂದು ಹೇಳಿದರು.
“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇನ್ನೊಬ್ಬರನ್ನು ಕೀಳು ಎಂದು ನೋಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂದು ಬಸವಣ್ಣನವರು ಮತ್ತೊಂದು ವಚನದಲ್ಲಿ ನಮಗೆಲ್ಲಾ ಕಿವಿಮಾತು ಹೇಳಿದ್ದಾರೆ. ಮನುಷ್ಯ ಒಳಗೆ, ಹೊರಗೆ ಎರಡೂ ಕಡೆಯೂ ಶುದ್ಧನಾಗಿ ಇರಬೇಕು ಎಂಬುದು ಇದರ ಅರ್ಥ” ಎಂದರು