ಬೆಂಗಳೂರು: ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ನಡೆದಿತ್ತು ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಅಯುಕ್ತರನ್ನು ವರ್ಗಾವಣೆ ಮಾಡಲಾಗಿದೆ.
ಅವರನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕದ ವೇಳೆ ನಡೆದಿದ್ದ ಹಗರಣ ಸಂಬಂಧ ಲೋಕಾಯುಕ್ತ ವಿಚಾರಣೆಗೆ ಅನುಮತಿ ಕೇಳಿದ್ದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಜಂಟಿ ಆಯುಕ್ತರ ವರ್ಗಾವಣೆಯಾಗಿದೆ.
102 ಕೋಟಿ ರೂ. ಹಗರಣ
ಕಲ್ಯಾಣ ಇಲಾಖೆಯಿಂದ ಹೆಸರೇ ಇಲ್ಲದ ಸೊಸೈಟಿಗಳಿಗೆ ಹಣ ವರ್ಗಾಯಿಸಿದ್ದ ಆರೋಪ ಕೇಳಿಬಂದಿತ್ತು. ಸುಮಾರು 102 ಕೋಟಿ ರೂಪಾಯಿ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿತ್ತು. ಕೋವಿಡ್ ವೇಳೆ ಹಣ ವರ್ಗಾಯಿಸಿದ್ದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. 2020 ರಿಂದ 2021ರ ಅವಧಿಯಲ್ಲಿ ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಈ ಬಹುಕೋಟಿ ಹಗರಣ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಹಣಕಾಸು ವಿಭಾಗದ 9 ಅಧಿಕಾರಿಗಳ ಮೇಲೆ ದೂರು ದಾಖಲಾಗಿತ್ತು.
ಹಣ ದುರುಪಯೋಗದ ಕುರಿತು ವಿಚಾರಣೆ ನಡೆಯುತ್ತಿದೆ. ಯಾವ ಆಧಾರದಲ್ಲಿ ಆರೋಪ ಮಾಡಲಾಗಿದೆ ಎಂಬುದನ್ನು ತಿಳಿಯಬೇಕಿದೆ. ಹಗರಣ ಸಂಬಂಧ ಲೋಕಾಯುಕ್ತರು ನಮ್ಮ ಬಳಿ ವರದಿ ಕೇಳಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದರು. ಹಗರಣ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ಕಚೇರಿ ಕೂಡ ಬಿಬಿಎಂಪಿಯಿಂದ ವರದಿ ಕೇಳಿತ್ತು.