ದಾವಣಗೆರೆ : ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಹೋದರ ಅಸಹಜ ಸಾವು ಎಂದು ದೂರು ದಾಖಲಿಸಿದ್ದಾರೆ.
ಬಿ.ಸಿ.ಪಾಟೀಲ್ ಅವರ ಅಳಿಯ ಪ್ರತಾಪ್ ಕುಮಾರ್ ಅವರು ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧಿಸಿದಂತೆ ಪ್ರತಾಪ್ ಕುಮಾರ್ ಸಹೋದರ ಪ್ರಭುದೇವ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿರುವುದು ಅಸಹಜ ಸಾವು, ಮದುವೆಯಾಗಿ ೧೬ ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಕೆ.ಜಿ ಪ್ರತಾಪ್ ಕುಮಾರ್ (೪೨) ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬಿ.ಸಿ.ಪಾಟೀಲ್ ಅವರ ಪುತ್ರಿ ಸೌಮ್ಯಾ ಪಾಟೀಲ್ ರನ್ನು ೨೦೦೮ ರಲ್ಲಿ ವಿವಾಹವಾಗಿದ್ದ ಪ್ರತಾಪ್ ಕುಮಾರ್ ಹೊನ್ನಾಳಿ ತಾಲೂಕಿನ ಶಿವಮೊಗ್ಗ-ಹರಿಹರ ರಸ್ತೆಯಲ್ಲಿರುವ ಅರಕೆರೆ ಗ್ರಾಮದ ರಸ್ತೆ ಬಳಿ ಪ್ರತಾಪ್ ಅವರ ಕಾರು ಪತ್ತೆಯಾಗಿದ್ದು, ಕೂಡಲೇ ಸ್ಥಳೀಯರು ಕಿಟಿಕಿ ಗಾಜಿನ ಮೂಲಕ ನೋಡಿದಾಗ, ಕಾರಿನ ಮುಂದಿನ ಸೀಟು ಬಳಿ ಕೃಷಿಗೆ ಬಳಸುವ ಕೀಟನಾಶಕದ ಬಾಟಲಿ ಕಂಡಿದೆ. ಪಕ್ಕದಲ್ಲೇ ಪ್ರತಾಪ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆಯೇ ಪ್ರತಾಪ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.