ಮೈಸೂರು: ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲತೆ ಮುಖ್ಯ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಭಿಪ್ರಾಯಪಟ್ಟರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ಸ್ನಾತಕೊತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಸ್ಟಾರ್ ಉತ್ಸವ್ ೨೦೨೩ ಎಂಬ ಒಂದು ವಾರದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬೌದ್ಧಿಕ ಬೆಳೆವಣಿಗೆಯಲ್ಲಿ ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಬಹುಮಖ್ಯ ಪಾತ್ರ ವಹಿಸುತ್ತವೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಲು ಒಂದು ಉತ್ತಮ ವೇದಿಕೆ ದೊರಕಿದಂತಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಮ್ಮ ದೇಶ ಬಹುಸಂಸ್ಕೃತಿಯ ದೇಶ-ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಾವು ಎಲ್ಲಾ ರಂಗಗಳಲ್ಲೂ ಮುಂದೆ ಬರಲು ಪ್ರಯತ್ನಿಸಬೇಕು ಹಾಗೂ ಎಲ್ಲವನ್ನು ಗೌರವಿಸುವುದನ್ನು ಕಲಿಯಬೇಕು. ಅಲ್ಲದೆ ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಅಭಿವ್ಯಕ್ತ ಪಡಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು. ಪ್ರಾಂಶುಪಾಲೆ ಡಾ.ಶಾರದ.ಎಂ ಮಾತನಾಡಿ, ವಿದ್ಯಾರ್ಥಿಗಳು ಓದುವುದರ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕು, ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎಂದರು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮಗೆ ಆಸಕ್ತಿ ಇರುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಇದರಿಂದ ಕ್ರಿಯಾಶೀಲ ಮನೋಭಾವ ಬೆಳವಣಿಗೆಯಾಗುತ್ತದೆ ಎಂದು ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಕರುಗಳಾದ ಡಾ.ಹೆಚ್.ಎಸ್.ಶ್ರೀಕಾಂತ್, ಡಾ.ಪವನ್.ಆರ್, ಲಕ್ಷ್ಮೀ.ಎಸ್ ಉಪಸ್ಥಿತರಿದ್ದರು.