ಚಿತ್ರದುರ್ಗ : ಅಲ್ಪಸಂಖ್ಯಾತರ ಸಮುದಾಯದ ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಲ್ಪಸಂಖ್ಯಾತರ ಸಮುದಾಯದವರು ಈ ಯೋಜನೆಗಳ ಅರಿವು ಪಡೆದು, ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರು ಮನವಿ ಮಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಅಲ್ಪಸಂಖ್ಯಾತರ ಸಮುದಾಯದವರ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರದುರ್ಗ ಜಿಲ್ಲೆ ಶಾಂತಿಯುತ ಜಿಲ್ಲೆಯಾಗಿದ್ದು, ಇಲ್ಲಿ ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಇಲ್ಲಿನ ಜನ ಶಾಂತಿಪ್ರಿಯರು, ಈ ಭಾಗದ ಜನರ ಸಂಸ್ಕøತಿ, ಹಿರಿಯರ ಮಾರ್ಗದರ್ಶನವೇ ಶಾಂತಿ ಸೌಹಾರ್ದತೆಗೆ ಕಾರಣವಾಗಿದೆ ಎಂದು ಪ್ರಶಂಸಿದರು.
ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸೇರಿದಂತೆ ಅಲ್ಪಸಂಖ್ಯಾತರ ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಅವರ ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳಡಿ, ವಿವಿಧ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳಲ್ಲಿ ಶೇ. 15 ರಷ್ಟು ಅಲ್ಪಸಂಖ್ಯಾತರ ವರ್ಗಕ್ಕೆ ನೀಡಬೇಕು ಎಂದಿದೆ. ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಉಂಟಾದಾಗ, ಅಲ್ಪಸಂಖ್ಯಾತರ ಆಯೋಗವು ಅವರ ರಕ್ಷಣೆಗೆ ನಿಲ್ಲುತ್ತದೆ, ಅಲ್ಪಸಂಖ್ಯಾತರಿಗೆ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಲು ಕ್ರಮ ಕೈಗೊಳ್ಳುತ್ತದೆ ಎಂದರು.
ಅಲ್ಪಸಂಖ್ಯಾತರ ಸಮುದಾಯದ ವಿವಿಧ ಸಾರ್ವಜನಿಕರು ಕುಂದುಕೊರತೆ ಸಭೆಯಲ್ಲಿ ಮನವಿ ಸಲ್ಲಿಸಿದರು. ಚಿತ್ರದುರ್ಗದ ಹೋಲಿ ಫ್ಯಾಮಿಲಿ ಚರ್ಚ್‍ನ ಫಾದರ್ ಕ್ಲಾರೆನ್ಸ್ ಡಯಾಸ್ ಅವರು ಮಾತನಾಡಿ, ತಮ್ಮ ಚರ್ಚ್ ನವೀಕರಣಕ್ಕೆ 30 ಲಕ್ಷ ರೂ. ಅನುದಾನ ಮಂಜೂರಾಗಿತ್ತು, ಇದರಲ್ಲಿ 22.5 ಲಕ್ಷ ರೂ. ಬಿಡುಗಡೆಯಾಗಿದ್ದು, ಬಾಕಿ ಇರುವ 7.5 ಲಕ್ಷ ರೂ. ಅನುದಾನ ಬಿಡುಗಡೆಗೆ ವಿಳಂಬವಾಗುತ್ತಿದೆ, ಈ ಬಗ್ಗೆ ಆಯೋಗವು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು. ಅಲ್ಪಸಂಖ್ಯಾತರ ಸಮುದಾಯದ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್‍ನವರು ಸಾಲ ಸೌಲಭ್ಯ ನೀಡುತ್ತಿಲ್ಲ, ಸಿಬಿಲ್ ಸ್ಕೋರ್, ಐಟಿ ರಿಟನ್ರ್ಸ್ ಸೇರಿದಂತೆ ವಿವಿಧ ನೆಪಗೊಳೊಡ್ಡಿ ಅರ್ಜಿ ತಿರಸ್ಕರಿಸುತ್ತಿದ್ದಾರೆ. ಇಲಾಖೆಗಳಿಂದ ಮಂಜೂರಾತಿ ದೊರೆತರೂ ಬ್ಯಾಂಕ್‍ಗಳು ಸಾಲ ನೀಡುತ್ತಿಲ್ಲ ಎಂದು ಕೆಲವರು ದೂರಿದರು, ಪ್ರತಿಕ್ರಿಯಿಸಿದ ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್ ಅವರು, 03 ಲಕ್ಷ ರೂ. ಗಳವರೆಗಿನ ಸಾಲಕ್ಕೆ ಬ್ಯಾಂಕ್‍ಗಳು ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂದು ಈಗಾಗಲೆ ಸರ್ಕಾರ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದೆ, ಬಾಧಿತರು ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್, ಆಯೋಗದ ಉಪನಿರ್ದೇಶಕ ರಘುನಾಥ್, ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ, ಜಿ.ಪಂ. ಯೋಜನಾ ನಿರ್ದೇಶಕ ಡಾ. ರಂಗಸ್ವಾಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರಾದ ತಾಜ್‍ಪೀರ್, ಕ್ಲಾರೆನ್ಸ್ ಡಯಾಸ್, ಅಬ್ದುಲ್ ಬಷೀರ್, ಅಬ್ದುಲ್ ರೆಹಮಾನ್ ಮುಂತಾದವರು ಉಪಸ್ಥಿತರಿದ್ದರು.